ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ಕೆ.ಜಿ ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್ ಅಲಿಯಾಸ್ ಇಮ್ರಾನ್ ಖಾನ್ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಇಮ್ರಾನ್ ಅಹ್ಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಪೀಠ ತನ್ನ ಆದೇಶದಲ್ಲಿ, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) 1967ರ ಅಡಿ ಆರೋಪಿಯ ಕೃತ್ಯಗಳು ಮೇಲ್ನೋಟಕ್ಕೆ ಭಯೋತ್ಪಾದನಾ ಕೃತ್ಯಕ್ಕೆ ಸಮನಾಗಿವೆ. ಕೆಜಿ ಹಳ್ಳಿ ಠಾಣೆ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗಳಿಗೆ ಇಮ್ರಾನ್ ಅಹ್ಮದ್ ಮತ್ತು ಇತರರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನ್ನು ಪೊಲೀಸರು ನೋಡಿದ್ದಾರೆ.
ಆರೋಪ ಪಟ್ಟಿಯಲ್ಲಿ ಸಾಕ್ಷಿಗಳನ್ನಾಗಿ ಉಲ್ಲೇಖಿಸಿರುವ ಪೊಲೀಸರು ಘಟನೆಯಲ್ಲಿ ಇಮ್ರಾನ್ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. ಗಲಭೆ ನಡೆದ ದಿನ ರಾತ್ರಿ 8.45 ರಿಂದ 9.15ರ ಸಮಯದಲ್ಲಿ ಇಮ್ರಾನ್ ಸಹ ಆರೋಪಿಗಳ ಜೊತೆ ಸಭೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಅಲ್ಲದೆ, ಅರ್ಜಿದಾರರು ಎಸ್‌ಡಿಪಿಐ ಅಧ್ಯಕ್ಷರಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳನ್ನು ನಂಬಲು ಸೂಕ್ತ ಕಾರಣಗಳಿವೆ. ಆದ್ದರಿಂದ, ಆರೋಪಿ ಇಮ್ರಾನ್ ಅಹ್ಮದ್ ಜಾಮೀನು ಕೋರಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.