ಬೆಂಗಳೂರು: ಅಪ್ರಾಪ್ತೆಗೆ ಹಣದ ಆಮಿಷ ನೀಡಿ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣವಾಗಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ಸಂಬಂಧ ಬಂಧನದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗೌಡಗೆರೆ ಗ್ರಾಮದ ಬಶೀರ್(44) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಮೊಹಮದ್ ನವಾಜ್ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತ ಬಾಲಕಿ ದೂರು ನೀಡುವ ಸಂದರ್ಭದಲ್ಲಿ ಆರೋಪಿಯ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಜೊತೆಗೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿಲ್ಲ. ಈ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದು, ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗ್ರಾಮವೊಂದರ 14 ವರ್ಷದ ಸಂತ್ರಸ್ತ ಬಾಲಕಿಯನ್ನು ಮಧುಗಿರಿ ಮೂಲದ ಗೌರಿ ಎಂಬುವರು ಪರಿಚಯ ಮಾಡಿಕೊಂಡಿದ್ದರು. ಜೊತೆಗೆ, ಹಣ ನೀಡುವುದಾಗಿ ಅಮಿಷ ನೀಡಿ ಇತರರೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಕುಮ್ಮಕ್ಕು ನೀಡುತ್ತಿದ್ದರು. ಈ ನಡುವೆ ಅರ್ಜಿದಾರ ಬಶೀರ್, ಗೌರಿ ಮೂಲಕ ಸಂತ್ರಸ್ತ ಬಾಲಕಿಗೆ ಹಣ ನೀಡಿ ಅತ್ಯಾಚಾರವೆಸಗಿದ್ದ.
ಇದರಿಂದ ಬಾಲಕಿ ಗರ್ಭಿಣಿಯಾಗಿದ್ದರು. ಸ್ಥಳೀಯ ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ಘಟನೆಗೆ ಕಳವಳ ವ್ಯಕ್ತಪಡಿಸಿದ್ದ ವೈದ್ಯರು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಶೀರ್‌ನ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಂದ ರಕ್ಷಣೆ(ಪೋಕ್ಸೋ) ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ(ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಚಿಕ್ಕಬಳ್ಳಾಪುರದ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಇದನ್ನೂ ಓದಿ: ಗ್ಯಾಂಗ್ರೇಪ್ ಆರೋಪಿಗಳ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿದ ಜಿಲ್ಲಾಡಳಿತ