ಬೆಂಗಳೂರು: ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಆರೋಪದಲ್ಲಿ ಬಂಧಿತನಾಗಿ ಮಂಜೂರಾಗಿದ್ದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ನೈಜೀರಿಯಾ ಪ್ರಜೆಯೊಬ್ಬನಿಗೆ ಐದು ವರ್ಷದ ಬಳಿಕ ಹೈಕೋರ್ಟ್ ಜಾಮೀನು ರದ್ದುಪಡಿಸಿದೆ.
ಸಮನ್ಸ್ ಮತ್ತು ವಾರೆಂಟ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ನೈಜೀರಿಯಾ ಮೂಲದ ಯಾಕೂಬ್ ಉಸ್ಮಾನ್ ಎಂಬುವವವನಿಗೆ ಮಂಜೂರಾಗಿದ್ದ ಜಾಮೀನು ರದ್ದು ಪಡಿಸುವಂತೆ ಕೋರಿ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಅಧಿಕಾರಿಗಳ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಟರಾಜನ್ ಅವರಿದ್ದ ನ್ಯಾಯಪೀಠ, ಆರೋಪಿಗೆ ಜಾಮೀನನ್ನು ರದ್ದುಪಡಿಸಿದೆ. ಅಲ್ಲದೆ, ಒಮ್ಮೆ ಮಂಜೂರಾದ ಜಾಮೀನನ್ನು ಬಲವಾದ ಕಾರಣಗಳಿದ್ದರೆ ಮಾತ್ರ ರದ್ದು ಮಾಡಲು ಅವಕಾಶವಿದೆ. ಆದರೆ, ಈ ಪ್ರಕರಣ ಅತ್ಯಂತ ಅಪರೂಪದ ಮತ್ತು ಅಸಾಧಾರಣದ್ದಾಗಿದೆ. ಈ ನಿಟ್ಟಿನಲ್ಲಿ ಜಾಮೀನು ರದ್ದು ಪಡಿಸುತ್ತಿರುವುದಾಗಿ ತಿಳಿಸಿದ್ದು, ಸುಪ್ರೀಂಕೋರ್ಟ್ ಈ ಹಿಂದೆ ನೀಡಿರುವ ತೀರ್ಪುಗಳನ್ನು ಆದೇಶದಲ್ಲಿ ಉಲ್ಲೇಖಿಸಿದೆ.
ಆರೋಪಿಗೆ ಸೂಕ್ತ ಕಾರಣವಿಲ್ಲದೆ ವಿಚಾರಣೆ ನಡೆಯುವ ಸಂದರ್ಭದಲ್ಲಿ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಜಾಮೀನಿನ ಷರತ್ತುಗಳನ್ನು ಆರೋಪಿ ಉಲ್ಲಂಘಿಸಿದ್ದಾನೆ. ಜತೆಗೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಜತೆಗೆ ಮತ್ತದೆ ಅದೇ ರೀತಿಯ ಆರೋಪಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಜಾಮೀನು ರದ್ದು ಪಡಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆರೋಪಿ ಕಳೆದ ಐದು ವರ್ಷಗಳ ಕಾಲ ಸಮನ್ಸ್ ಜಾರಿ ಮಾಡಿರುವುದು ಮತ್ತು ವಾರೆಂಟ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. 5 ವರ್ಷ ಕಳೆದರೂ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೊಂದು ದುರದೃಷ್ಟಕರ ಸಂಗತಿಯಾಗಿದೆ. ಆರೋಪಿ ವಿದೇಶಿ ಪ್ರಜೆ ಮಾತ್ರವಲ್ಲದೆ ವಿಚಾರಣೆಗೆ ಹಾಜರಾಗದೆ ಪ್ರಕರಣವನ್ನು ಐದು ವರ್ಷಗಳಿಗೂ ಹೆಚ್ಚು ಕಾಲ ವಿಳಂಬಕ್ಕೆ ಕಾರಣರಾಗಿದ್ದಾರೆ. ನ್ಯಾಯಾಂಗ ಪ್ರಕ್ರಿಯೆ ಅಡ್ಡಿಪಡಿಸಿದ್ದ ಅರ್ಜಿ ವಿಲೇವಾರಿಯಾಗದಿರಲು ಕಾರಣರಾಗಿದ್ದಾರೆ. ಮತ್ತೆ ಇದೀಗ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಮತ್ತೆ ಸಿಕ್ಕಿಬಿದ್ದಿದ್ದಾನೆ ಎಂದು ಆದೇಶಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿ ಯಾಕೂಬ್ ಉಸ್ಮಾನ್ 2017ರ ಮಾರ್ಚ್ 27ರಂದು ಮೂರು ಗ್ರಾಂ ಮೆಂಥಾಪೆಟಮೈನ್, 40 ಗ್ರಾಂ ಹ್ಯಾಶಿಸ್ ಎಣ್ಣೆ, 430 ಗ್ರಾಂ ಗಾಂಜಾ ಮತ್ತು 0.04 ಗ್ರಾಂ ಎಲ್ಎಸ್ಡಿ ಪೇಪರ್ ಬ್ಲಾಟ್ಗಳೊಂದಿಗೆ ಬಂಧಿಸಲಾಗಿತ್ತು. ಈ ನಡುವೆ ಆರೋಪಿಗೆ 2017ರ ಏಪ್ರಿಲ್ 15ರಂದು ಶ್ಯೂರಿಟಿ, ಸಾಕ್ಷ್ಯ ನಾಶ ಮಾಡಬಾರದು, ತಲೆ ಮರೆಸಿಕೊಳ್ಳಬಾರು, ಮತ್ತೆ ಇದೇ ರೀತಿಯ ಆರೋಪಗಳಲ್ಲಿ ಭಾಗಿಯಾಗಬಾರದು ಎಂಬುದಾಗಿ ಷರತ್ತುಗಳನ್ನು ವಿಧಿಸಿ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಆದರೆ, ಆರೋಪಿ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಲ್ಲದೆ ಮತ್ತೆ ಅದೇ ರೀತಿಯ ಆರೋಪದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಜಾಮೀನು ರದ್ದು ಮಾಡುವಂತೆ ಕೋರಿ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಐಆರ್‌ಸಿಟಿಸಿ ಹಗರಣ: ತೇಜಸ್ವಿ ಯಾದವ್ಗೆ ಸಂಕಷ್ಟ.. ಜಾಮೀನು ರದ್ದು ಮಾಡುವಂತೆ ಕೋರ್ಟ್ಗೆ ಹೋದ ಸಿಬಿಐ