ಬೆಂಗಳೂರು: ಬೀದಿ ಪ್ರಾಣಿಗಳ ಕಲ್ಯಾಣಕ್ಕಾಗಿ ಯಾವ ಯೋಜನೆ ಇದೆ?. ಈಗಾಗಲೇ ಯಾವುದಾದರೂ ಯೋಜನೆ ಜಾರಿಗೊಳಿಸಲಾಗಿದೆಯೇ? ಎಂಬ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯದ ಪ್ರತಿ ತಾಲೂಕಿನಲ್ಲೂ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಮೇವು, ನೀರು, ಸೂಕ್ತ ಜಾಗ ಮತ್ತು ಆರೋಗ್ಯ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಆರ್ಬಿಐ ಮೂಲಕ 50,000 ಕೋಟಿ ಸಾಲ ಮಾಡಲಿರುವ ರಾಜ್ಯ ಸರ್ಕಾರ: ಈವರೆಗೆ 22,000 ಕೋಟಿ ಸಾಲ!
ಈ ವೇಳೆ ಬೀದಿ ಪ್ರಾಣಿಗಳು ರೈತರ ಬೆಳೆಗಳನ್ನು ನಾಶಪಡಿಸುತ್ತವೆ. ಅವುಗಳನ್ನು ನಿಯಂತ್ರಿಸಲು ಸರ್ಕಾರ ಯೋಜನೆ ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ, ಗೋ ಸಂರಕ್ಷಣೆ ಮಾಡಬೇಕು ಎಂದು ಸರ್ಕಾರವೇ ಹೇಳುತ್ತಿದೆ. ಅದೇ ರೀತಿ ಬೀದಿ ಪ್ರಾಣಿಗಳ ಸಂರಕ್ಷಣೆ ಸಹ ಅತ್ಯಗತ್ಯವಾಗಿದ್ದು, ಅದಕ್ಕಾಗಿ ಸರ್ಕಾರ ಏನು ಮಾಡುತ್ತಿದೆ? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.ಸರ್ಕಾರಿ ವಕೀಲರು ಉತ್ತರಿಸಿ, ಬೀದಿ ಪ್ರಾಣಿಗಳ ಕಲ್ಯಾಣಕ್ಕಾಗಿ ಯಾವುದಾದರೂ ಯೋಜನೆ ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಮನವಿ ಪರಿಗಣಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಜ.22ಕ್ಕೆ ಮುಂದೂಡಿತು.