ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ರಾಜ್ಯ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಖಾಸಗಿ ಶಾಲೆಗಳಲ್ಲಿನ ಪ್ರಸಕ್ತ ಸಾಲಿನ ಬೋಧನಾ ಶುಲ್ಕವನ್ನು ಶೇ.30ರಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಖಾಸಗಿ ಶಾಲೆಗಳ ಸಂಘಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಅವರಿದ್ದ ಏಕ ಸದಸ್ಯ ಪೀಠದ ವಿಚಾರಣೆ ನಡೆಸಿತು.
ಈ ವೇಳೆ ಶಾಲೆಗಳ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಖಾಸಗಿ ಶಾಲೆಗಳ ನ್ಯಾಯಸಮ್ಮತವಾಗಿ ನಿಗದಿಪಡಿಸಿದ ಶುಲ್ಕದಲ್ಲಿ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು. ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂಬುದಾಗಿ ಇಂಡಿಯನ್ ಸ್ಕೂಲ್ ಆಫ್ ಜೋಧ್ಪುರ ಮತ್ತು ರಾಜಸ್ಥಾನ ಸರ್ಕಾರ ನಡುವಿನ ಪ್ರಕರಣದಲ್ಲಿ 2021ರ ಮೇ 3ರಂದು ಸುಪ್ರೀಂ ಕೊರ್ಟ್ ಹೊರಡಿಸಿರುವ ತೀರ್ಪಿನ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು.
ತೀರ್ಪು ಪರಿಶೀಲಿಸಿದ ಪೀಠ, ಅರ್ಜಿಗಳಲ್ಲಿ ಎತ್ತಿರುವ ವಿಚಾರ ಸುಪ್ರೀಂಕೋರ್ಟ್ ತೀರ್ಪಿಗೆ ಒಳಪಡುತ್ತದೆ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪು ಕುರಿತು ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 31 ಮುಂದೂಡಿತು.
ಖಾಸಗಿ ಶಾಲೆಗಳಲ್ಲಿನ ಬೋಧನಾ ಶುಲ್ಕವನ್ನು ಕಡಿತ ಮಾಡಿ ಸರ್ಕಾರ 2021ರ ಜ.29ರಂದು ಆದೇಶಿಸಿದೆ. ಈ ಆದೇಶ ಪ್ರಶ್ನಿಸಿರುವ ಅರ್ಜಿದಾರ ಶಾಲೆಗಳು, ಸರ್ಕಾರದ ಆದೇಶದಿಂದ ಶುಲ್ಕ ಸಂಗ್ರಹ ಕಡಿಮೆಯಾಗಲಿದ್ದು, ಕಾರ್ಯನಿರ್ವಹಣೆ ಕಷ್ಟವಾಗುತ್ತದೆ. ಶಿಕ್ಷಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಮಾಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಲಾಗಿದೆ.