ಬೆಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶಿಸಿದ್ದಕ್ಕೆ ದೇಶದ್ರೋಹ ಆರೋಪದಡಿ ಬೀದರ್ನ ಶಾಹಿನ್ ಶಿಕ್ಷಣ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ನಿಯಮ ಮೀರಿ ಶಾಲಾ ಮಕ್ಕಳನ್ನು ವಿಚಾರಣೆಗೊಳಪಡಿಸಿದ ಪೊಲೀಸರ ವಿರುದ್ಧ ಕೈಗೊಂಡಿರುವ ಕ್ರಮಗಳ ವರದಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಈ ಕುರಿತು ವಕೀಲೆ ನಯನ ಜ್ಯೋತಿ ಝಾವರ್ ಹಾಗೂ ಮಾನವ ಹಕ್ಕುಗಳ ಸಂಘಟನೆ ಸಿಕ್ರಮ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿ ಸಂಬಂಧ ಡಿವೈಎಸ್‌ಪಿ ಬಸವೇಶ್ವರ್ ಸಲ್ಲಿಸಿದ್ದ ವರದಿ ಹಾಗೂ ಅರ್ಜಿದಾರರು ಫೋಟೋ ಸಹಿತ ಸಲ್ಲಿಸಿದ್ದ ಹೆಚ್ಚುವರಿ ಮಾಹಿತಿ ಪರಿಶೀಲಿಸಿದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಇದು ನಿಜಕ್ಕೂ ಶಾಕಿಂಗ್, ಶಸ್ತ್ರಾಸ್ತ್ರ ಸಹಿತ ಸಮವಸ್ತ್ರ ಧರಿಸಿರುವ ಪೊಲೀಸರು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದು ಸರಿಯೇ ಸರ್ಕಾರ ಪ್ರಶ್ನಿಸಿದ ಕೋರ್ಟ್
ಫೋಟೋದಲ್ಲಿ ಇದು ಸ್ಪಷ್ಟವಾಗಿದೆ. ಇದಕ್ಕೇನು ವಿವರಣೆ ನೀಡುತ್ತೀರಿ ಎಂದು ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿತು. ಅಲ್ಲದೇ, 5 ಮಂದಿ ಪೊಲೀಸರಲ್ಲಿ ನಾಲ್ವರು ಸಮವಸ್ತ್ರದಲ್ಲಿದ್ದಾರೆ, ಇಬ್ಬರು ಶಸ್ತ್ರಾಸ್ತ್ರ ಹೊಂದಿದ್ದಾರೆ. ಹೀಗೆ ಸಮವಸ್ತ್ರ, ಶಸ್ತ್ರಾಸ್ತ್ರ ಹೊಂದಿರುವ ಅಧಿಕಾರಿಗಳು ಮಕ್ಕಳನ್ನು ವಿಚಾರಣೆಗೆ ಒಳಪಡಿಸುತ್ತಿರುವುದು ಫೋಟೋಗಳಲ್ಲಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಬಾಲ ನ್ಯಾಯ ಕಾಯ್ದೆಗಳ ಉಲ್ಲಂಘನೆ ಎಂದಿತು.
ಜತೆಗೆ, ತಪ್ಪೆಸಗಿರುವ ಪೊಲೀಸರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಪೀಠ, ಈ ಕುರಿತು ವಿವರಣೆ ನೀಡಲು ಹಿರಿಯ ಅಧಿಕಾರಿಯ ಖುದ್ದು ಹಾಜರಿಗೆ ಸೂಚನೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿತು.
ಘಟನೆ ಸಂಬಂಧ ಪೊಲೀಸರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಏನು ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಐಜಿಪಿಯಿಂದ ನಿಯೋಸಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೆಪ್ಟೆಂಬರ್ 3ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :
ಬೀದರ್ನ ಶಹಾಪುರಗೇಟ್ನ ಶಾಹಿನ್ ಪ್ರಾಥಮಿಕ ಶಾಲೆಯಲ್ಲಿ 2020ರ ಜನವರಿ 21ರಂದು ನಡೆದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಕ್ಕಳು ನಾಟಕ ಪ್ರದರ್ಶಿಸಿದ್ದರು. ಅದರಲ್ಲಿ ಪ್ರಧಾನಿ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಲಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಿಲೇಶ್ ರಕ್ಷ್ಯಾಲ್ ಜನವರಿ 26ರಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಪೊಲೀಸರು ಸಮವಸ್ತ್ರದಲ್ಲೇ ತೆರಳಿ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದರು. ಇದು ಪೊಲೀಸ್ ಕೈಪಿಡಿ, ಬಾಲ ನ್ಯಾಯ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕಲಾಂ ಪುಸ್ತಕ ನೀಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ..!