ಬೆಂಗಳೂರು : ಕೇಂದ್ರ ಸರ್ಕಾರ ಅನ್ ಲಾಕ್ ಆದೇಶದಡಿ ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದರೂ ಕೂಡ ರಾಜ್ಯ ಸರ್ಕಾರ ಏಕೆ ನಿರ್ಬಂಧ ವಿಧಿಸಿದೆ ಎಂದು ಪ್ರಶ್ನಿಸಿರುವ ಹೈಕೋರ್ಟ್ ಈ ಸಂಬಂಧ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ತಮಿಳುನಾಡಿನ ಹೊಸೂರಿನಿಂದ ಬೆಂಗಳೂರು ಕಡೆಗೆ ನಿತ್ಯವೂ ಕೆಲಸಕ್ಕೆ ಬರುವ ಕಾರ್ಮಿಕರ ಸಂಚಾರಕ್ಕೆ ರಾಜ್ಯದ ಅಧಿಕಾರಿಗಳು ಅಡ್ಡಿ ಮಾಡುತ್ತಿರುವುದನ್ನು ಪ್ರಶ್ನಿಸಿ ವಕೀಲೆ ಇಂದಿರಾ ಪ್ರಿಯದರ್ಶಿನಿ ಸಲ್ಲಿಸಿರುವ ಸಾರ್ಜಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ವಕೀಲೆ ಇಂದಿರಾ ಪ್ರಿಯದರ್ಶಿನಿ ವಾದಿಸಿ, ಹೊಸೂರು ಸೇರಿದಂತೆ ತಮಿಳುನಾಡಿನ ಗಡಿ ಭಾಗದ ಸಾವಿರಾರು ಜನ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ. ಆದರೆ ಪೊಲೀಸರು ಇವರ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ರಾಜ್ಯ ಪ್ರವೇಶಿಸುವ ಜನರು ಸೇವಾಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಉದ್ಯೋಗದಾತ ಸಂಸ್ಥೆಯಿಂದ ಈ ಕುರಿತು ಪತ್ರ ತರಬೇಕು. ನಂತರ ಇ-ಪಾಸ್ ಪಡೆದು ರಾಜ್ಯ ಪ್ರವೇಶಿಸಬೇಕು ಎಂದು ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರದ ಈ ಆದೇಶದಿಂದಾಗಿ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಉನ್ನತ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ತಮ್ಮ ಉದ್ಯೋಗದಾತ ಸಂಸ್ಥೆಯಿಂದ ಪತ್ರ ತಂದುಕೊಡಬಹುದು. ಆದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಅಂತಹ ಪತ್ರ ತರುವುದು ಕಷ್ಟ. ಕೇಂದ್ರ ಸರ್ಕಾರ ಅನ್ ಲಾಕ್ ಆದೇಶದ ಮೂಲಕ ಅಂತರ ರಾಜ್ಯ ಸಂಚಾರವನ್ನು ಮುಕ್ತಗೊಳಿಸಿದೆ. ಹೀಗಾಗಿ ತಮಿಳುನಾಡು ಗಡಿಭಾಗದ ಜನ ಬೆಂಗಳೂರಿಗೆ ಓಡಾಡಲು ಅಡ್ಡಿಪಡಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಕೀಲ ವಿಕ್ರಮ್ ಹುಯಿಲ್ಗೋಳ್ ಅವರು ವಾದಿಸಿ, ಸೇವಾ ಸಿಂಧು ಪೋರ್ಟಲ್ ನಲ್ಲಿ ಹೆಸರು ದಾಖಲಿಸುವ ಪ್ರಕ್ರಿಯೆಯನ್ನು ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸುವ ಉದ್ದೇಶದಿಂದ ಮಾಡಲಾಗಿದೆ. ಉಳಿದಂತೆ ಕೆಲಸದ ನಿಮಿತ್ತ ಸಂಚರಿಸುವ ಜನ ಉದ್ಯೋಗದಾತರಿಂದ ಪತ್ರ ತಂದರೆ ಅವರ ಓಡಾಟಕ್ಕೆ ಯಾವುದೇ ಅಡ್ಡಿಯಿಲ್ಲ ಎಂದರು.
ಇದನ್ನು ಒಪ್ಪದ ಪೀಠ ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಮೇಲೆ ಹೀಗೆ ಮಾಡಿದರೆ ಕಾರ್ಮಿಕರು ಕೆಲಸಕ್ಕೆ ಹೋಗುವುದು ಹೇಗೆ ಎಂದು ಪ್ರಶ್ನಿಸಿ ಈ ಸಂಬಂಧ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ಆಗಸ್ಟ್ 24 ಕ್ಕೆ ವಿಚಾರಣೆ ಮುಂದೂಡಿತು.