ಬೆಂಗಳೂರು : ರಾಜ್ಯದ ಎಲ್ಲ ಜನರಿಗೆ ಕಾಲಮಿತಿಯಲ್ಲಿ ಲಸಿಕೆ ನೀಡಲು ರೂಪಿಸಿರುವ ಯೋಜನೆ ಕುರಿತು ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ಪೀಠ ಈ ನಿರ್ದೇಶ ನೀಡಿದೆ.
ಅರ್ಜಿಗಳ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಲಸಿಕೆ ಕೊರತೆಯಾಗುವುದಿಲ್ಲ ಎಂದು ತಿಳಿಸಿ ಪ್ರಮಾಣ ಪತ್ರ ಸಲ್ಲಿಸಿದರು. ಈ ಹೇಳಿಕೆ ಪರಿಗಣಿಸಿದ ಪೀಠ, ಸೋಂಕಿನ ತೀವ್ರತೆ ತಗ್ಗುತ್ತಿದೆ. ಜತೆಗೆ ಲಸಿಕೆ ನೀಡುವುದನ್ನು ತೀವ್ರಗೊಳಿಸಬೇಕಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜನರಿಗೆ ಲಸಿಕೆಯನ್ನು ನೀಡಲು ಕಾಲಮಿತಿಯ ಯೋಜನೆ ಹಾಕಿಕೊಂಡಿದ್ದರೆ ಆ ಬಗ್ಗೆ ಮುಂದಿನ ವಿಚಾರಣೆ ವೇಳೆ ವಿವರ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ಇದನ್ನು ಓದಿ:ಜೈಲು ಹಕ್ಕಿಗಳಿಂದ ಮೊಬೈಲ್ನಲ್ಲಿ ಕೋರ್ಟ್ ಕಲಾಪ ವೀಕ್ಷಣೆ: ತನಿಖೆಗೆ ಆದೇಶಿಸಲು ಮುಂದಾದ ಹೈಕೋರ್ಟ್
ಅಲ್ಲದೆ, ಈಗಾಗಲೇ ಕಾಲೇಜುಗಳನ್ನು ಆರಂಭಿಸಿರುವುದರಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಲಸಿಕಾ ಶಿಬಿರಗಳನ್ನು ನಡೆಸಲಾಗುತ್ತಿದೆಯೇ ಎಂಬ ಕುರಿತು ವಿವರ ಸಲ್ಲಿಸಬೇಕು. ಈ ಹಿಂದೆ ಪೀಠ ನೀಡಿರುವ ಆದೇಶದಂತೆ ಮೂರನೇ ಸಂಭಾವ್ಯ ಅಲೆ ತಡೆಯಲು ಕೈಗೊಂಡಿರುವ ಕ್ರಿಯಾ ಯೋಜನೆಯ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿತು.
ಲಸಿಕೆ ಕೊರತೆಯಾಗದು :
ಜುಲೈ-ಆಗಸ್ಟ್ನಲ್ಲಿ ಸುಮಾರು 60.87 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ ಬಾಕಿ ಇದೆ. ಕೇಂದ್ರದಿಂದ 63,52,420 ಡೋಸ್ ಕೋವಿಶೀಲ್ಡ್ ಮತ್ತು 11,29,000 ಕೋವ್ಯಾಕ್ಸಿನ್ ಲಸಿಕೆ ದೊರಕಲಿದೆ. ಹೀಗಾಗಿ ಜುಲೈ-ಆಗಸ್ಟ್ನಲ್ಲಿ ಕೋವಿಡ್ ಲಸಿಕೆ ಕೊರತೆಯಾಗದು. ಹಾಗೆಯೇ, ದಿವ್ಯಾಂಗರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರಿಗೆ ಲಸಿಕೆ ಹಾಕಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದ್ದ ಮಕ್ಕಳಿಗೆ ಇತರೆ ಲಸಿಕೆ ಹಾಕುವುದನ್ನು ಪುನಾರಂಭಿಸಲಾಗಿದೆ. ನಿಗದಿತ ದಿನಗಳಂದು ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ ಎಂದು ಸರ್ಕಾರ ಲಿಖಿತ ಮಾಹಿತಿ ನೀಡಿದೆ.
ಕುಂದುಕೊರತೆ ನಿವಾರಣಾ ಘಟನೆ ಸ್ಥಾಪನೆ :
ವಿಚಾರಣೆ ವೇಳೆ ಶ್ರೀಧರ್ ಪ್ರಭು ಪೀಠಕ್ಕೆ ಮಾಹಿತಿ ನೀಡಿ, ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಕೋವಿಡ್ ರೋಗಿಗಳಿಗೆ ನಿಗದಿಗಿಂತ ಅಧಿಕ ಶುಲ್ಕ ವಿಧಿಸಲಾಗಿದೆ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿವೆ. ಈ ಕುರಿತು ದೂರುಗಳ ವಿಲೇವಾರಿಗೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇಂತಹ ದೂರುಗಳನ್ನು ಪರಿಶೀಲಿಸಲು ಸರ್ಕಾರ ಶೀಘ್ರವೇ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸಬೇಕು ಎಂದು ನಿರ್ದೇಶಿತು.
ಮಧ್ಯಂತರ ಆದೇಶಗಳ ವಿಸ್ತರಣೆ :
ಕೋವಿಡ್ ಹಿನ್ನೆಲೆಯಲ್ಲಿ ಕಕ್ಷೀದಾರರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ಹಿಂದೆ ಮಧ್ಯಂತರ ಆದೇಶಗಳಿಗೆ ತಡೆ ನೀಡಿ ಹೊರಡಿಸಿದ್ದ ಆದೇಶವನ್ನು ಮತ್ತೆ ಆಗಸ್ಟ್ 23ರವರೆಗೆ ಮುಂದುವರಿಸುವಂತೆ ಪೀಠ ಆದೇಶಿಸಿತು. ಈ ಕುರಿತು ರಿಜಿಸ್ಟ್ರಾರ್ ಜನರಲ್ (ನ್ಯಾಯಾಂಗ) ಪ್ರತ್ಯೇಕ ಆದೇಶಗಳನ್ನು ಹೊರಡಿಸಲಿದ್ದಾರೆ. ಈವರೆಗೆ ಒತ್ತುವರಿ ತೆರವು ಸೇರಿದಂತೆ ನಾನಾ ಪ್ರಕರಣಗಳಲ್ಲಿ ನೀಡಲಾಗಿದ್ದ ಮಧ್ಯಂತರ ತಡೆ ಆದೇಶಗಳನ್ನು ವಿಸ್ತರಿಸಲಾಗುವುದು ಎಂದು ಪೀಠ ಸ್ಪಷ್ಟಪಡಿಸಿತು.