ಬೆಂಗಳೂರು: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ ಮತ್ತು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ ಪಡೆಯಲಾಗದೇ ತೊಂದರೆಗೆ ಸಿಲುಕಬಾರದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘರಾಜೇಂದ್ರ ಶರಣರಿಂದ ವೇತನ ಪಾವತಿಸುವ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ನೀಡಿದೆ.
ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಮಠದ ಬ್ಯಾಂಕ್ ಖಾತೆಗಳ ಚೆಕ್‌ಗಳಿಗೆ ಸಹಿ ಹಾಕುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ, ಅರ್ಜಿ ಇತ್ಯರ್ಥಪಡಿಸಿದೆ.
ಮಠದ ವಿದ್ಯಾಪೀಠ ಸಂಸ್ಥೆಗಳ ಉದ್ಯೋಗಿ ಹಾಗೂ ಸಿಬ್ಬಂದಿಗೆ ವೇತನ ನೀಡುವುದಕ್ಕಾಗಿ ಅ. 3, 6 ಮತ್ತು 10ರಂದು ಮಾತ್ರ ಚೆಕ್‌ಗಳಿಗೆ ಸಹಿ ಹಾಕಬಹುದು. ಸಹಿ ಪಡೆಯುವ ವ್ಯಕ್ತಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆ ವೇಳೆ ತನಿಖಾಧಿಕಾರಿ ಹಾಗೂ ಜೈಲು ಅಧೀಕ್ಷಕರು ಉಪಸ್ಥಿತರಿರಬೇಕು. ಅಲ್ಲದೇ, ಸಹಿ ಮಾಡಿದ ಚೆಕ್ಗಳ ನಕಲು (ಜೆರಾಕ್ಸ್) ಪ್ರತಿಗಳನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.
ಅಷ್ಟೇ ಅಲ್ಲದೆ, ಈ ಅನುಮತಿ ಅಕ್ಟೋಬರ್ ತಿಂಗಳಿಗೆ ಮಾತ್ರ ಈ ಆದೇಶ ಅನ್ವಯ. ಮುಂದಿನ ತಿಂಗಳಿನಿಂದ ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಶರಣರಿಂದ ಮತ್ತೊಬ್ಬರಿಗೆ ವರ್ಗಾಯಿಸುವ ಸಂಬಂಧ ಪವರ್ ಆಫ್ ಅಟಾರ್ನಿ ವ್ಯವಸ್ಥೆ ಮಾಡಬೇಕು ಎಂಬ ಮನವಿಯನ್ನು ಅರ್ಜಿದಾರರು ವಿಚಾರಣಾ ನ್ಯಾಯಾಲಯ ಸಲ್ಲಿಸಬೇಕು. ನ್ಯಾಯಾಲಯ ಮನವಿ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಮಾಡಬಹುದು ಎಂದು ವಿಚಾರಣಾ ನ್ಯಾಯಾಲಯಕ್ಕೆ ನ್ಯಾಯಪೀಠವು ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ?: ಮುರುಘಾ ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ವೇತನ ನೀಡಬೇಕಾದರೆ ಮಠದ ಏಕೈಕ ಟ್ರಸ್ಟಿ ಆಗಿರುವ ಶಿವಮೂರ್ತಿ ಶರಣರು ಚೆಕ್‌ಗಳಿಗೆ ಸಹಿ ಮಾಡಬೇಕು. ಪ್ರತಿ ತಿಂಗಳು 200 ಚೆಕ್‌ಗಳಿಗೆ ಸಹಿ ಮಾಡಬೇಕು. ಇಲ್ಲವಾದಲ್ಲಿ ವೇತನ ಬಿಡುಗಡೆ ಆಗುವುದಿಲ್ಲ. ಹೀಗಾಗಿ ಚೆಕ್ ಗಳಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಅಲ್ಲದೇ, ಕರ್ನಾಟಕ ಕಾರಾಗೃಹ ಕಾಯಿದೆ 1963ರ ಸೆಕ್ಷನ್ 40ರ ಅಡಿ ಅರ್ಜಿದಾರರು ವಿಚಾರಣಾಧೀನ ಕೈದಿಯಾಗಿದ್ದು, ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ: ಮೀಸಲು ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್