ಬೆಂಗಳೂರು: ಕೋರ್ಟ್ ಕಲಾಪದ ವೇಳೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ನಿಂದನೀಯ ಭಾಷೆ ಬಳಸಿ, ನಂತರ ತಮ್ಮ ತಪ್ಪಿಗೆ ಕ್ಷಮೆ ಕೋರಿದ ಸಿಂದಗಿ ವಕೀಲ ಎಂ ವೈ ಪಾಟೀಲ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ.
ಪ್ರಕರಣ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಬಿ ಪ್ರಭಾಕರ ಶಾಸ್ತ್ರಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಸೂಚನೆಯಂತೆ ಯಾವ ನ್ಯಾಯಾಧೀಶರ ಎದುರು ನಿಂದನೀಯ ಭಾಷೆ ಬಳಸಿದ್ದರೋ ಅವರ ಮುಂದೆಯೇ ವಕೀಲ ಪಾಟೀಲ್ ಹಾಜರಾಗಿ ತಮ್ಮ ತಪ್ಪಿಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಇದೇ ಮಾದರಿಯ ವರ್ತನೆ ಭವಿಷ್ಯದಲ್ಲಿ ತೋರುವುದಿಲ್ಲ ಎಂಬ ಭರವಸೆಯಿದೆ. ಹೀಗಾಗಿ, ಪಾಟೀಲ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಲಾಗುತ್ತಿದೆ ಎಂದು ತಿಳಿಸಿದ ಪೀಠ ಪ್ರಕರಣ ಮುಕ್ತಾಯಗೊಳಿಸಿದೆ.
ಪ್ರಕರಣವೇನು?
ವೈವಾಹಿಕ ವ್ಯಾಜ್ಯದ ವಿಚಾರಣೆ ಸಂದರ್ಭದಲ್ಲಿ ಸಿಂದಗಿ ಜೆಎಂಎಫ್‌ಸಿ ನ್ಯಾಯಾಧೀಶರ ವಿರುದ್ಧ ವಕೀಲ ನಿಂದನೀಯ ಭಾಷೆ ಬಳಸಿದ್ದರು. ಈ ಸಂಬಂಧ ನ್ಯಾಯಾಧೀಶರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದ್ದರು. ನ್ಯಾಯಾಲಯಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್, ವಕೀಲ ಪಾಟೀಲ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿತ್ತು.