ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೆ ಕೇಂದ್ರದ ಪ್ರಭಾವಿ ನಾಯಕರೊಬ್ಬರ ಕೈವಾಡವಿದೆ. ಅವರ ಬೆಂಬಲದಿಂದಾಗಿಯೇ ಶಿಸ್ತು ಕ್ರಮದಂತಹ ಶಿಕ್ಷೆ ಯತ್ನಾಳ್ ಅವರನ್ನ ಸುತ್ತಿಕೊಳ್ತಿಲ್ಲ. ಇದಕ್ಕೆ ನಿನ್ನೆ ನಡೆದ ಶಾಸಕರ ಸಭೆಯಲ್ಲೂ ರೆಬಲ್ ಆದ ಯತ್ನಾಳ್ ಪರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೃದು ಧೋರಣೆ ತೋರಿದ್ದೇ ನಿದರ್ಶನ.
ಕಳೆದ ಕೆಲ ತಿಂಗಳಿನಿಂದ ಪದೇಪದೆ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಅದರ ಪರಿದಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿಎಂ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಇಷ್ಟಾದ್ರೂ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪ್ರಯತ್ನ ಮಾತ್ರ ನಡೆದಿಲ್ಲ.
ಪಕ್ಷದ ಬಿ ಫಾರಂ ಪಡೆದು ಯಾರು ಚುನಾವಣೆಗೆ ಸ್ಪರ್ಧೆ ಮಾಡಿರುತ್ತಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಮಗೆ ಸಾಧ್ಯವಿಲ್ಲ. ಕೇಂದ್ರ ಸಮಿತಿ ಕ್ರಮಕೈಗೊಳ್ಳಬೇಕು. ಯತ್ನಾಳ್ ವಿರುದ್ಧ ಕ್ರಮಕ್ಕೆ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿ. ಈ ರೀತಿಯ ಸೃಷ್ಟಿ ಸರಿಯಲ್ಲ ಎಂದು ನೇರವಾಗಿ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ಯತ್ನಾಳ್ ಕುರಿತು ಎಲ್ಲವನ್ನೂ ಹೈಕಮಾಂಡ್ ಕಡೆ ಬೆರಳು ಮಾಡಿ ತೋರುವ ಮೂಲಕ ರಾಜ್ಯ ಘಟಕ ಯತ್ನಾಳ್ ವಿರುದ್ಧ ತಟಸ್ಥ ನಿಲುವು ತೋರುವ ಸುಳಿವು ನೀಡಿದರು. ಇದಕ್ಕೆ ಕಾರಣ ಪಕ್ಷದ ಕೇಂದ್ರ ನಾಯಕರೊಬ್ಬರ ಕೃಪಾಕಟಾಕ್ಷ ಯತ್ನಾಳ್ ಮೇಲೆ ಇರುವುದು ಎನ್ನಲಾಗಿದೆ.
ನಿನ್ನೆ ನಡೆದ ಶಾಸಕರ ಸಮಾಲೋಚನಾ ಸಭೆಯಲ್ಲಿಯೂ ಯತ್ನಾಳ್ ಅಬ್ಬರಿಸಿದ್ದಾರೆ. ಅನುದಾನ ಸರಿಯಾಗಿ ಕೊಡುತ್ತಿಲ್ಲ ಎನ್ನುವ ಪ್ರಸ್ತಾಪದೊಂದಿಗೆ ಸಿಎಂ ಕಾರ್ಯವೈಖರಿ, ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಕುರಿತು ಕಿಡಿಕಾರಿದರು. ಏರಿದ ದನಿಯಲ್ಲಿ ಅಸಮಾಧಾನ ಹೊರ ಹಾಕಿದರು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಸಿಎಂ ನನಗೂ ಕಿವಿ ಕೇಳಿಸುತ್ತದೆ, ನಿಧಾನವಾಗಿಯೇ ಮಾತನಾಡಿ ಎಂದರು.
ಆದ್ರೂ ಸುಮ್ಮನಾಗದ ಯತ್ನಾಳ್ ವಾಗ್ದಾಳಿ ಮುಂದುವರೆಸಿದ್ದರಿಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮಧ್ಯ ಪ್ರವೇಶಕ್ಕೆ ಯತ್ನಿಸಿದರು. ಇದಕ್ಕೆ ಅವಕಾಶ ನೀಡದ ಯತ್ನಾಳ್, ನಾನು ಮಾತನಾಡುವಾಗ ಅಡ್ಡ ಬರಬೇಡ, ನಿನ್ನ ಸರದಿ ಬಂದಾಗ ಅಭಿಪ್ರಾಯ ನೀವು ಹೇಳಿ ಸಾಕು ಎಂದು ಬಾಯಿ ಮುಚ್ಚಿಸಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ಪಕ್ಷದ ಶಾಸಕರೊಬ್ಬರನ್ನು ನಿಯಂತ್ರಿಸಲು ಸಾಧ್ಯವಾಗದ ಅಸಹಾಯಕತೆಯಲ್ಲಿ ಅವರಿಬ್ಬರೂ ಇದ್ದಿದ್ದನ್ನು ನೋಡಿದ್ರೆ, ಕೇಂದ್ರದ ಪ್ರಭಾವಿ ನಾಯಕರೊಬ್ಬರ ಬೆಂಬಲ ಯತ್ನಾಳ್ಗೆ ಇದೆ ಎನ್ನುವುದಕ್ಕೆ ಪುಷ್ಠಿ ನೀಡಿದೆ.
ಯತ್ನಾಳ್ ಬೆಂಬಲಕ್ಕೆ ಹಿರಿಯ ನಾಯಕ ಉಮೇಶ್ ಕತ್ತಿ ಕೂಡ ಸಾಥ್ ನೀಡುತ್ತಿದ್ದು, ಸಂಪುಟ ವಿಸ್ತರಣೆ ಪ್ರಯತ್ನ ಶುರುವಾದಾಗಲೆಲ್ಲಾ ತಮ್ಮ ಅಸಮಾಧಾನ ಹೊರ ಹಾಕುತ್ತಾ ಪಕ್ಷ ಹಾಗೂ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುತ್ತಲೇ ಬಂದಿದ್ದಾರೆ.
ನಿನ್ನೆ ನಡೆದ ಸಭೆಯಲ್ಲೂ ಅದು ಮುಂದುವರೆದಿತ್ತು. ಯತ್ನಾಳ್ ಹೇಳಬೇಕಾಗಿದ್ದೆಲ್ಲಾ ಹೇಳಿ ನಂತರ ಸಿಎಂ ಸಮಜಾಯಿಷಿಯಿಂದ ತೃಪ್ತರಾಗದೆ ಸಭೆಯಿಂದ ಅರ್ಧಕ್ಕೆ ಹೊರ ನಡೆದಿದ್ದಾರೆ ಎನ್ನಲಾಗಿದೆ. ಆದರೂ ಪಕ್ಷ ಅವರ ಅಶಿಸ್ತನ್ನು ಸಹಿಸುತ್ತಿದೆ.
ರಾಜ್ಯ ಬಿಜೆಪಿ ಮೂಲಗಳ ಪ್ರಕಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಬೆಂಬಲ ಬಸನಗೌಡ ಪಾಟೀಲ್ ಯತ್ನಾಳ್ಗೆ ಇದೆ. ಅದಕ್ಕಾಗಿಯೇ ಅವರ ವಿರುದ್ಧ ಶೋಕಾಸ್ ನೋಟಿಸ್, ಶಿಸ್ತುಕ್ರಮ ತೆಗೆದುಕೊಳ್ಳುವಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎನ್ನಲಾಗುತ್ತಿದೆ.