ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುವಾಗ ಉಂಟಾದ ಗಲಾಟೆಗೆ ಸಂಬಂಧಪಟ್ಟಂತೆ 50 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಇಡೀ ರಾತ್ರಿ ಜೆ.ಜೆ. ನಗರ ಠಾಣೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ನೇತೃತ್ವದಲ್ಲಿ, ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಮತ್ತು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ 6 ಜನ ಎಸಿಪಿಗಳು, 20 ಇನ್ಸ್ ಪೆಕ್ಟರ್ಗಳು, 25 ಜನ ಪಿಎಸ್ಐಗಳು,10 ಕೆಎಸ್ಆರ್ಪಿ ತುಕಡಿ, 220 ಕಾನ್ಸ್ಸ್ಟೇಬಲ್ಗಳು, 2 ಒಆರ್ಟಿ ಟೀಂ, ದಿ ಸ್ಪಾಟ್ ಸ್ಪೆಷಲ್ ಪೊಲೀಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್ಡಿಎಂಎ), ಐಪಿಸಿ ಸೆಕ್ಷನ್ 353 (ಸರ್ಕಾರಿ ಕೆಲಸಕ್ಕೆ ಅಡ್ಡಿ), 307 (ಕೊಲೆ ಯತ್ನ)ಎನ್ಎಂಎ ಕಾಯ್ದೆ, 332, 324, 201ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾದರಾಯನಪುರದಲ್ಲಿ 18 ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಸಂಪೂರ್ಣ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿತ್ತು. ಸೋಂಕಿತರ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ 58 ಮಂದಿಯನ್ನು ಕ್ವಾರಂಟೈನ್ ಮಾಡಲು ಬಿಬಿಎಂಪಿ ಸಿಬ್ಬಂದಿ ಹಾಗೂ ಆರೊಗ್ಯಾಧಿಕಾರಿಗಳು ಪಾದಾರಯನಪುರದ ಆರ್ಫತ್ ನಗರಕ್ಕೆ ತೆರಳಿದ್ದರು. ಸೋಂಕಿತರ ಜೊತೆ ಸಂಪರ್ಕ ಹೊಂದಿದ ಸಂಬಂಧಿಕರಿಗೆ ಕ್ವಾರಂಟೈನ್ನಲ್ಲಿರುವಂತೆ ಅಧಿಕಾರಿಗಳು ಸೂಚಿಸಿದಾಗ, ಅದಕ್ಕೊಪ್ಪದ ಸಾರ್ವಜನಿಕರು ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಸದ್ಯ, ಪರಿಸ್ಥಿತಿ ಹತೋಟಿಗೆ ಬಂದಿದ್ದು, ಸ್ಥಳದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ.