ಬೆಂಗಳೂರು: ಕೋವಿಡ್ ಸೋಂಕಿನಿಂದ ಸಾಕಷ್ಟು ಜನರು ಸಾವನ್ನಪುತ್ತಿದ್ದರೆ, ಆ ಸಾವಿನ ಆಘಾತದಲ್ಲಿ ಅವರ ಕುಟುಂಬ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ಕೊರಗಿನಲ್ಲಿ ಮಾನಸಿಕ ಆರೋಗ್ಯವನ್ನು ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಸಹ ಹೆಚ್ಚುತ್ತಿದೆ. ಅಧ್ಯಯನದ ಪ್ರಕಾರ 10ರಲ್ಲಿ 2ರಷ್ಟು ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಕೆಲವರು ಅಪರಾಧ ಪ್ರಜ್ಞೆಗೂ ಒಳಗಾಗುತ್ತಿದ್ದಾರೆ ಎಂದು ನಗರದ ಫೋರ್ಟಿಸ್ ಆಸ್ಪತ್ರೆ ಮನೋವೈದ್ಯ ಡಾ. ವೆಂಕಟೇಶ್ ಬಾಬು ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ ಅಲೆಯಿಂದ ವಿಶ್ವದಲ್ಲೇ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರ ಸಾವಿನ ಸುದ್ದಿಯ ಆಘಾತದಿಂದ ಹೊರಬರಲಾಗದೇ ಎಷ್ಟೋ ಜನರು ಮಾನಸಿಕವಾಗಿ ಬಳಲುತ್ತಿರುವ ಪ್ರಕರಣಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿವೆ ಎಂದಿದ್ದಾರೆ.
ಮಾನಸಿಕ ನೆಮ್ಮದಿಗಾಗಿ ಕೆಲ ಸಲಹೆಗಳು:
ಕೋವಿಡ್‌ನಿಂದ ನಿಮ್ಮ ಆತ್ಮೀಯರು ಸಾವನ್ನಪ್ಪಿದ್ದರೆ, ಆ ಕೊರಗಿನಿಂದ ಹೊರ ಬರಲು ಒಂದಷ್ಟು ಆರೋಗ್ಯಕರ ಚಟುವಟಿಕೆಯನ್ನು ರೂಢಿಸಿಕೊಳ್ಳುವುದು ಅನಿವಾರ್ಯ. ಇಲ್ಲವಾದರೆ, ಇದೇ ಕೊರಗು ನಮ್ಮ/ನಿಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ ಎಂದು ಡಾ. ವೆಂಕಟೇಶ್ ಬಾಬು ಹೇಳುತ್ತಾರೆ.
1. ಸಾವನ್ನು ಒಪ್ಪಿಕೊಳ್ಳಿ: ನಿಮ್ಮ ಆತ್ಮೀಯರೊಬ್ಬರು ಕೋವಿಡ್‌ಗೆ ಬಲಿಯಾಗಿದ್ದರೆ ಮೊದಲು ಆ ಸತ್ಯವನ್ನು ಒಪ್ಪಿಕೊಳ್ಳಿ. ಇದು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಲು ತೆಗೆದುಕೊಳ್ಳುವ ಮೊದಲ ಹಂತ ಎನ್ನಬಹುದು.
2. ಏಕಾಂಕಿಯಾಗಿರಬೇಡಿ: ತಮ್ಮವರ ಸಾವಿನಿಂದ ಎಂಥವರ ಮನಸ್ಸು ಕೂಡ ಜರ್ಜರಿತವಾಗಿರುತ್ತದೆ. ಆದರೆ, ಹಾಗೆಂದು ಅದೇ ಯೊಚನೆಯಲ್ಲಿ ಕೊರಗಲು ಹೋಗುವುದು ತಪ್ಪು. ಅದರಲ್ಲೂ ಏಕಾಂಗಿಯಾಗಿ ಇರಲು ಬಯಸುವುದನ್ನು ನಿಲ್ಲಿಸಿ. ಸಾಧ್ಯವಾದಷ್ಟು ಆ ಸ್ಥಳ ಬದಲಾವಣೆಯಿಂದ ಅಥವಾ ಜನರೊಂದಿಗೆ ಬೆರೆಯುವುದರಿಂದ ನೋವು ಮರೆಯಲು ನೆರವಾಗಬಹುದು.
3. ದೈಹಿಕ ವ್ಯಾಯಾಮ ರೂಢಿಸಿಕೊಳ್ಳಿ: ದೈಹಿಕವಾಗಿ ಆರೋಗ್ಯಕರವಾಗಿರುವುದು ಬಹಳ ಮುಖ್ಯ. ದೈಹಿಕ ವ್ಯಾಯಾಮ ನಮ್ಮ ದೇಹ ಹೆಚ್ಚು ಕ್ರಿಯಾಶೀಲವಾಗಿರಲು ಸಹಕಾರಿ. ಇದು ಹಳೇ ನೋವಿನಿಂದ ಹೊರಬರಲು ಸುಲಭ ಮಾರ್ಗವಾಗಿದೆ.
4. ಕೌನ್ಸಲಿಂಗ್ ತೆಗೆದುಕೊಳ್ಳಿ: ಮಾನಸಿಕ ನೋವು, ಖಿನ್ನತೆಗೆ ತಿರುಗುತ್ತಿದೆ ಎಂದು ನಿಮಗನಿಸುತ್ತದ್ದರೆ ಕೂಡಲೇ ಮನೋವೈದ್ಯರನ್ನು ಭೇಟಿ ಮಾಡಿ ಕೌನ್ಸಲಿಂಗ್ ತೆಗೆದುಕೊಳ್ಳಿ. ಇದರಿಂದ ಖಿನ್ನತೆಗೆ ಒಳಗಾಗುವ ಅಪಾಯ ತಪ್ಪುತ್ತದೆ. ಒಂದು ವೇಳೆ ಖಿನ್ನತೆಗೆ ಒಳಗಾಗಿದ್ದರೆ ಅದಕ್ಕೂ ಈ ಕೌನ್ಸಲಿಂಗ್ ಪರಿಹಾರ ಎಂದರೆ ತಪ್ಪಾಗಲಾರದು.
5. ಅಪರಾಧ ಪ್ರಜ್ಞೆಯನ್ನು ತೆಗೆದುಹಾಕಿ: ಇನ್ನೂ ಕೆಲವರು, ತಮ್ಮವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಅಪರಾಧ ಪ್ರಜ್ಞೆಯಲ್ಲಿ ಕೊರಗುತ್ತಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ಘಟ್ಟ. ಮೊದಲು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಈ ಪ್ರಜ್ಞೆಯಿಂದ ಹೊರ ಬರುವ ದಾರಿ ಕಂಡುಕೊಳ್ಳಬೇಕು.
6. ಮನಸ್ಸಿಗೆ ಇಷ್ಟವಾಗುವ ಕೆಲಸ ಮಾಡಿ: ಹೌದು, ಆಗಿದ್ದನ್ನೇ ನೆನೆದು ಕೊರಗುವುದಕ್ಕಿಂತ ಮುಂದಿನದತ್ತ ಗಮನ ಹರಿಸುವುದು ಒಳ್ಳೆಯದು. ಹೀಗಾಗಿ ನಿಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಉದಾಹರಣೆಗೆ, ಸಂಗೀತ ಕೇಳುವುದು, ಓದುವುದು, ಮಕ್ಕಳೊಂದಿಗೆ ಬೆರೆಯುವುದು ಇತ್ಯಾದಿ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದವರು 2.90 ಕೋಟಿ ಮಂದಿ