ಬೆಂಗಳೂರು: ಟ್ರಾಫಿಕ್ ಜಾಮ್ ಉಂಟಾದಾಗ ಸಂಚಾರಿ ಪೊಲೀಸರು ವಾಹನ ದಟ್ಟಣೆಯಾಗಿರುವ ಮಾರ್ಗದಲ್ಲಿ ಸಂಚಾರಿಸಬೇಡಿ ಎಂದು ಹೇಳುವುದು ಸರ್ವೇಸಾಮಾನ್ಯ. ಇಲ್ಲಿಯೂ ಸಹ ಟ್ರಾಫಿಕ್ ಪೊಲೀಸರು ಈ ಮಾರ್ಗಗಳಲ್ಲಿ ವಾಹನ ಚಲಾಯಿಸಬೇಡಿ ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸಿ ಎಂದು ಮನವಿ ಮಾಡುತ್ತಿದ್ದಾರೆ. ಈ ಬಾರಿ ಮನವಿ ಮಾಡುತ್ತಿರುವುದು ಟ್ರಾಫಿಕ್ ಜಾಮ್ ಕಾರಣಕ್ಕೆ ಅಲ್ಲ, ರಸ್ತೆಗಳು ಜಲಾವೃತ ಆಗಿದ್ದಕ್ಕಾಗಿ ಎನ್ನುತ್ತಿದ್ದಾರೆ.
ಕಳೆದ ಒಂದು ವಾರದಿಂದ ಐಟಿ ಸಿಟಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರಾಜಧಾನಿ ಥಂಡಾ ಹೊಡೆದಿದೆ. ಬಿಟ್ಟು ಬಿಡದೆ ಬರುತ್ತಿರುವ ಮಹಾಮಳೆಗೆ ನಗರದ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿ ಕೋಡಿ ಒಡೆದ ಕೆರೆಯಂತಾಗಿವೆ. ಒಳಚರಂಡಿ ಹಾಗೂ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಐಟಿ-ಬಿಟಿ ಕಂಪನಿಗಳಿರುವ ಮಾರತ್ಹಳ್ಳಿ, ಬೆಳ್ಳಂದೂರು ಸುತ್ತಮುತ್ತ ಮಳೆ ನೀರು ರಸ್ತೆಯಲ್ಲೇ ನಿಂತಿದೆ.
ಈ ಭಾಗದ ನಿವಾಸಿಗಳು ಹಾಗೂ ಕೆಲಸಮಾಡುವ ಐಟಿ ಉದ್ಯೋಗಿಗಳ ಪಾಡು ಹೇಳತೀರದಾಗಿದೆ. ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಗಮ ಸಂಚಾರಕ್ಕೆ ಮಳೆ ನೀರು ಕಂಟಕವಾಗತೊಡಗಿದೆ. ಮುಂಜಾಗ್ರತ ಕ್ರಮವಾಗಿ ಮಡಿವಾಳ ಸಂಚಾರಿ ಪೊಲೀಸರು ಮೈಕ್ ಹಿಡಿದು ಈ ಭಾಗದ ರಸ್ತೆಗಳಿಗೆ ತೆರಳಬೇಡಿ ಎಂದು ವಾಹನ ಸವಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಎಚ್ಚರಿಕೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ : ಕೆ.ಆರ್. ಪುರಂ, ಮಾರತ್ಹಳ್ಳಿ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿ ಸಂಚರಿಸಬೇಡಿ. ಬೆಳ್ಳಂದೂರಿನ ಇಕೋಸ್ಟೇಸ್ ಬಳಿ ಮಳೆ ನೀರು ತುಂಬಿದೆ. ಸುಗಮವಾಗಿ ಸಂಚಾರಿಸಲು ಸಾಧ್ಯವಿಲ್ಲ. ಹೀಗಾಗಿ ಮಾರತ್ಹಳ್ಳಿ, ವರ್ತೂರು, ಮಹದೇವಪುರ ಕಡೆ ಹೋಗುವ ವಾಹನ ಸವಾರರು ಮಡಿವಾಳ, ಸೋನಿ ಸಿಗ್ನಲ್, ಕೋರಮಂಗಲ ಹಾಗೂ ದೊಮ್ಮಲೂರು ಮೂಲಕ ತೆರಳುವಂತೆ ಟ್ರಾಫಿಕ್ ಪೊಲೀಸರು ಮೈಕ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ದಾಖಲೆಯ ಮಳೆ: ಜಲಾವೃತಗೊಂಡ ರಸ್ತೆ, ಟ್ರಾಫಿಕ್ ಜಾಮ್ ನೋಡಿ!