ಬೆಂಗಳೂರು: ಎಂದಿನಂತೆ ಕೆಲ ಸೆಂಟಿಮೀಟರ್ ಮಳೆಗೆ ತತ್ತರಿಸಿ ಹೋಗುವ ಬಿಳೇಕಹಳ್ಳಿ, ಬೊಮ್ಮನಹಳ್ಳಿ ಭಾಗದ ರಸ್ತೆಗಳು ಇದೀಗ ಸುರಿದ ದಿಢೀರ್ ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ. ಬೆಂಗಳೂರು-ಬನ್ನೇರುಘಟ್ಟ ಮುಖ್ಯ ರಸ್ತೆಯ ಬಿಳೇಕಳ್ಳಿ ಭಾಗದ ಕೆಲ ಬಡಾವಣೆಗಳು ಮಳೆ ನೀರು ಆವರಿಸಿದ್ದರಿಂದ ಜಲಾವೃತವಾಗಿವೆ.
ರಸ್ತೆಯಲ್ಲಿ ಓಡಾಡುವ ಕಾರು, ಆಟೋ ದ್ವಿಚಕ್ರ ವಾಹನಗಳಂತೂ ಅರ್ಧಂಬರ್ಧ ಮುಳುಗಿ ಸಂಚಾರಕ್ಕೆ ಮಳೆ ಅಡ್ಡಿಪಡಿಸಿದೆ. ಅದರಲ್ಲೂ ಅನುಗ್ರಹ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ಹರಿದು ಮತ್ತೆ ಜನರು ಭೀತಿಗೊಳಗಾಗಿದ್ದಾರೆ.
ರಾಜಕಾಲುವೆಗಳ ಒತ್ತುವರಿ ಕೆರೆ ಹಳ್ಳ ಕೊಳ್ಳಗಳಲ್ಲಿ ಅಕ್ರಮ ಮನೆಗಳ ನಿರ್ಮಾಣದಿಂದ ಮಳೆ ನೀರು ಎತ್ತ ಹರಿಯಲು ಅಸಾಧ್ಯವಾದ ವಾತಾವರಣ ಇರುವುದರಿಂದ ಮಳೆ ಬಂದರೆ ಬೊಮ್ಮನಹಳ್ಳಿ ಬಿಳೇಕಹಳ್ಳಿ ಹುಳಿಮಾವು ಅರಕೆರೆಯ ಭಾಗಗಳಲ್ಲಿ ಜೀವ ಕೈಲಿಡಿದು ಬದುಕುವ ಪರಿಸ್ಥಿತಿಯಿದೆ.
ಆಗೊಮ್ಮೆ ಈಗೊಮ್ಮೆ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿ ವರ್ಗ ಶಾಸಕ ಎಂ ಸತೀಶ್ ರೆಡ್ಡಿ, ಎಂ ಕೃಷ್ಣಪ್ಪ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಮಾಯವಾಗುವುದೂ ಪ್ರತಿಬಾರಿಯ ನಾಟಕವಾಗಿ ಪರಿಣಮಿಸಿದೆ ಎನ್ನುವುದು ಜನರ ಆಕ್ರೋಶವಾಗಿದೆ.