ಬೆಂಗಳೂರು: ಬಂಗಾಳ ಉಪಸಾಗರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮುಂದಿನ 24 ಗಂಟೆಯಲ್ಲಿ ಮತ್ತಷ್ಟು ತೀವ್ರವಾಗಿ 'ನಿವಾರ್' ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ.
ಇದರ ಪ್ರಭಾವದಿಂದ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆ ನವೆಂಬರ್ 25 ಹಾಗೂ 26 ರಂದು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕರಾದ ಸಿ. ಎಸ್. ಪಾಟೀಲ್ ತಿಳಿಸಿದ್ದಾರೆ.
ನಿವಾರ್ ಸೈಕ್ಲೋನ್ ನಾಳೆ ಪಾಂಡಿಚೇರಿ ಹಾಗೂ ತಮಿಳುನಾಡು ಕರಾವಳಿಯನ್ನು ದಾಟಿ, ಕರೈಕಲ್ ಮತ್ತು ಮಹಾಬಲಿಪುರಂಗೆ ಬರುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕದ ಕರಾವಳಿಯಲ್ಲಿ ನವೆಂಬರ್ 25, 26 ಮತ್ತು 27 ರಂದು ಕೆಲವು ಕಡೆ ಹಗುರ ಮಳೆಯಾಗುವ ನಿರೀಕ್ಷೆ ಇದೆ.
ಉತ್ತರ ಒಳನಾಡಿನಲ್ಲಿ ಇಂದು ಒಣ ಹವೆ ಮುಂದುವರೆದಿದೆ. ನವೆಂಬರ್ 24 ರಿಂದ 27 ರವರೆಗೂ ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯಾದ್ಯಂತ ಒಣ ಹವೆ ಮುಂದುವರೆದಿದೆ. ಬೆಂಗಳೂರಿನಲ್ಲಿ ನಗರದಲ್ಲಿ ನವೆಂಬರ್ 25 ಹಾಗೂ 26 ರಂದು ಭಾರಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಸಿ. ಎಸ್. ಪಾಟೀಲ್ ತಿಳಿಸಿದ್ದಾರೆ.