ಬೆಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗುಂಬೆಯಲ್ಲಿ 20 ಸೆಂ.ಮೀ, ಉನ್ನಡಕನ್ನಡ ಜಿಲ್ಲೆಯ ಕದ್ರದಲ್ಲಿ 14 ಸೆಂ.ಮೀ, ಕೊಟ್ಟಿಗೆಹಾರ-ಚಿಕ್ಕಮಗಳೂರು ಜಿಲ್ಲೆಯಲ್ಲಿ 14 ಸೆಂ.ಮೀ, ಕಾರವಾರದಲ್ಲಿ 10 ಸೆಂ.ಮೀ, ಸಿದ್ದಾಪುರ-ಉತ್ತರ ಕನ್ನಡ ಜಿಲ್ಲೆಯಲ್ಲಿ-11 ಸೆಂ.ಮೀ ಮಳೆಯಾಗಿದೆ ಎಂದು ಇಲಾಖೆಯ ನಿರ್ದೇಶಕರಾದ ಸಿ ಎಸ್ ಪಾಟೀಲ್ ತಿಳಿಸಿದರು.
ಟ್ರಫ್ (ದಟ್ಟ ಮೋಡ) ಪೂರ್ವ ಅರಬ್ಬೀ ಸಮುದ್ರದ ಕರ್ನಾಟಕದ ಕರಾವಳಿಯಲ್ಲಿದೆ. ಇದರ ಪರಿಣಾಮದಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ (ಜೂನ್ 16 ರಿಂದ) 20 ರವರೆಗೆ ವ್ಯಾಪಕ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ ಇಂದು ಮತ್ತು ನಾಳೆಗೆ ಆರೆಂಜ್ ಅಲರ್ಟ್ ಕೊಡಲಾಗಿದೆ. ಜೂನ್ 18 ರಿಂದ 20ರವರೆಗೆ ಸಾಧಾರಣ ಮಳೆಯಾಗಲಿರುವುದರಿಂದ ಎಲ್ಲೋ ಅಲರ್ಟ್ ಕೊಡಲಾಗಿದೆ.
ಇದನ್ನೂ ಓದಿ: ಮೃಗಶಿರ ಮಳೆಗೆ ಮಲೆನಾಡು ತತ್ತರ: ಹೊಸನಗರದಲ್ಲಿ 170 ಮಿ.ಮೀ ಮಳೆ, ತುಂಗಾ ಡ್ಯಾಮ್ ಭರ್ತಿ
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಇಂದು ವ್ಯಾಪಕ ಮಳೆಯಾಗಲಿದೆ. ಜೂನ್ 17 ರಿಂದ 19ರವರೆಗೆ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಲಿದೆ. ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ಇಂದು ಎಲ್ಲೋ ಅಲರ್ಟ್ ಕೊಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿಗೆ ಆರೆಂಜ್ ಅಲರ್ಟ್ ಕೊಡಲಾಗಿದೆ. ಜೂನ್ 17,18 ರಂದು ಎಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹಗುರ ಮಳೆಯಾಗುವ ಸಾಧ್ಯತೆ ಇದೆ.