ಕಲಬುರಗಿ: ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲೆ, ಅಂಗನವಾಡಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ. ಕಳೆದ ಐದಾರು ದಿನಗಳಿಂದ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜುಲೈ 26ರಂದು ಭಾರಿ ವರ್ಷಧಾರೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸೇತುವೆ ಸಂಪರ್ಕ ಕಡಿತ: ಸತತ ಮಳೆಯಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಹಲವೆಡೆ ಅವಘಡಗಳು ಸಂಭವಿಸಿವೆ. ಚಿಂಚೋಳಿ ತಾಲೂಕಿನಲ್ಲಿ ಗಾರಂಪಳ್ಳಿ ಸೇತುವೆ ಮೇಲೆ ನೀರು ತುಂಬಿ ಹರಿದು ಕೆಲವು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ನರನಾಳ ಕೆರೆಯಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುತ್ತಿದ್ದು, ಮುಲ್ಲಾಮಾರಿ ನದಿಯ ಪಕ್ಕದಲ್ಲಿರುವ ಹಳ್ಳಿಗಳಾದ ಚಿಮನಚೋಡ್, ತಾದಲಾಪುರ್, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ಮತ್ತು ನಿಮ್ಮಹೊಸಳ್ಳಿ ಗ್ರಾಮಗಳಿಗೆ ಭಾರಿ ಹಾನಿ ಉಂಟಾಗಿದೆ. ನೂರಾರು ಎಕರೆ ಜಮೀನಿನಲ್ಲಿದ್ದ ಬೆಳೆಗಳು ಹಾಳಾಗಿದೆ. ರೋಗಿಗಳು ಆಸ್ಪತ್ರೆಗೆ ಹೋಗಲು ಪರದಾಡುವಂತಾಗಿದೆ.
ಕಾಗಿನಾ ನದಿಯು ಮೈದುಂಬಿ ಹರಿಯುತ್ತಿದ್ದು, ಶಹಬಾದ ಬಳಿಯ ದಂಡೋತಿ ಸೇತುವೆ ಸಂಚಾರ ಕಡಿತಗೊಂಡಿದೆ. ಶಹಬಾದ ತಾಲೂಕಿನ ಮುತ್ತುಗಾ ಗ್ರಾಮದ ಬ್ರಿಡ್ಜ್ ಕೂಡ ಮುಳುಗಡೆಯಾಗಿದೆ. ಚಿಂಚೋಳಿ ತಾಲೂಕಿನ ಭಕ್ತಂಪಳ್ಳಿ- ಗರಕಪಳ್ಳಿ ಗ್ರಾಮದ ನಡುವಿನ ರಸ್ತೆ ಸಂಚಾರ ಬಂದ್ ಆಗಿದೆ. ಸೇಡಂ ತಾಲೂಕಿನ ಕುಂಚೂರು ಸೇತುವೆಯೂ ಮುಳುಗಡೆಯಾಗಿದೆ.
ವಿದ್ಯುತ್ ತಗುಲಿ ಯುವಕ, ಎತ್ತು ಸಾವು: ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಯುವಕ ಹಾಗೂ ಒಂದು ಎತ್ತು ಮೃತಪಟ್ಟ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕು ಕರದಾಳ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಹೆಗಲೇರಿ (24) ಹಾಗೂ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಸಂಜೆ ಜಮೀನಿನಿಂದ ಮನೆಗೆ ಬರುವಾಗ ಜೋತುಬಿದ್ದ ವಿದ್ಯುತ್ ತಂತಿಗೆ ಬಾರುಕೋಲು ತಗುಲಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನದಿ ದಡದಲ್ಲಿ ಹುಚ್ಚಾಟ ನಡೆಸದಂತೆ ಡಿಸಿ ಸೂಚನೆ: ಜಿಲ್ಲೆಯ ನದಿ, ಹಳ್ಳ, ಕೆರೆ ದಡದತ್ತ ಸಾರ್ವಜನಿಕರು ಹೋಗಬಾರದು. ಯುವಕರು ಫೋಟೋ, ಸೇಲ್ಫಿ ಗೀಳಿಗೆ ಬೀಳದಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ನದಿ ದಂಡೆಯತ್ತ ಜಾನುವಾರುಗಳನ್ನು ಬಿಡಬಾರದು. ನದಿ ಪಾತ್ರದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದರ ಜೊತೆಗೆ ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸಬಾರದು. ದಡದಲ್ಲಿನ ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರದಲ್ಲಿ ಪೂಜೆ ಸಲ್ಲಿಸಲು ತೆರಳದಂತೆ ತಿಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿನ ಅಧಿಕಾರಿಗಳು, ಕೇಂದ್ರ ಸ್ಥಾನದಲ್ಲಿದ್ದು ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ರತಿದಿನ ದಿನದ ನೆರೆ ಹಾನಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ 6 ತಾಲೂಕುಗಳ ಶಾಲೆಗೆ ರಜೆ: ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ, ನಿಪ್ಪಾಣಿ, ಮೂಡಲಗಿ, ಯರಗಟ್ಟಿ, ಬೆಳಗಾವಿ ಹಾಗೂ ಸವದತ್ತಿ ತಾಲ್ಲೂಕನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಖಾನಾಪುರ ತಾಲೂಕಿನಲ್ಲಿ ಮಾತ್ರ ಪಿಯು ಕಾಲೇಜುಗಳಿಗೆ ಬುಧವಾರ (ಜು.26) ಒಂದು ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ. ಬೆಳಗಾವಿ, ಖಾನಾಪುರ, ಮೂಡಲಗಿ, ಸವದತ್ತಿ, ಯರಗಟ್ಟಿ, ನಿಪ್ಪಾಣಿ ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೂ ಬುಧವಾರ ರಜೆ ಇರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಉತ್ತರಕನ್ನಡದ 4 ತಾಲೂಕುಗಳಲ್ಲಿ ಶಾಲೆಗೆ ರಜೆ: ವ್ಯಾಪಕ ಮಳೆ ಆಗುತ್ತಿರುವುದರಿಂದ ಉತ್ತರಕನ್ನಡ ಜಿಲ್ಲೆಯ ಕಾರವಾರ, ಜೋಯಿಡಾ, ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗಿದೆ. ಇನ್ನುಳಿದ ತಾಲೂಕುಗಳಲ್ಲಿ ಮಳೆ ಪ್ರಮಾಣ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ತಹಶೀಲ್ದಾರ್ರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡದಲ್ಲೂ ರಜೆ: ಭಾರಿ ಮಳೆಯಾಗುತ್ತಿರುವುದರಿಂದ ಇಂದು (ಜು. 26) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಗ್ರಾಮೀಣ ಮತ್ತು ದೂರದ ಪ್ರದೇಶಗಳಿಂದ ಬರುವ ಪದವಿ ವಿದ್ಯಾರ್ಥಿಗಳಿಗೆ ಹಾಜರಾಗಲು ಸಾಧ್ಯವಾಗದಿದ್ದರೆ ಆನ್ಲೈನ್ ತರಗತಿ ನಡೆಸಲು ಸಂಬಂಧಪಟ್ಟ ವಿದ್ಯಾ ಸಂಸ್ಥೆಗಳು ಅವಕಾಶ ಕಲ್ಪಿಸುವಂತೆ ಡಿಸಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲೂ ಶಾಲೆಗೆ ರಜೆ: ಹಾವೇರಿ ಜಿಲ್ಲೆಯಲ್ಲಿ ಬುಧವಾರವೂ ಕೂಡ ಮಳೆಯ ಅಬ್ಬರ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯ ಹಾನಗಲ್ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಘುನಂದನಮೂರ್ತಿ ರಜೆ ಘೋಷಿಸಿದ್ದಾರೆ. ಪದವಿ ಮತ್ತು ಐಟಿಐ ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಭೋರ್ಗರೆಯುತ್ತಿರುವ ನೇತ್ರಾವತಿ: 1974ರ ಬಳಿಕ ಮತ್ತೆ ಮುಳುಗುವ ಭೀತಿಯಲ್ಲಿ ಬಂಟ್ವಾಳ?