ಬೀದರ್ : ಗಡಿ ಜಿಲ್ಲೆಯಲ್ಲಿ ಕೆಲವೆಡೆ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಮಲನಗರ ತಾಲೂಕಿನ ದಾಬಕಾ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹದ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ಮೂರು ದಿನ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ನಿನ್ನೆ ತಡರಾತ್ರಿ ವರುಣನ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ದಾಬಕಾ ಗ್ರಾಮದ ಸುತ್ತಮುತ್ತ 105 ಮಿ.ಮೀ ದಾಖಲೆಯ ಮಳೆಯಾಗಿದೆ ಎಂದು ತಿಳಿದು ಬಂದಿದೆ.
ಹಲವೆಡೆ ಮಳೆ ನೀರು ಆವೃತಗೊಂಡು ಜನರು ಮನೆಯಿಂದ ಹೊರ ಬರಲಾಗದೆ ಪರದಾಡುವಂತಾಗಿತ್ತು. ಸದ್ಯ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ಇಂದು ಕೂಡ ಜಿಲ್ಲೆಯಲ್ಲಿ ಭಾರಿ ವರ್ಷಧಾರೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ನೈಋತ್ಯ ಮುಂಗಾರು ತುಸು ಚುರುಕು: ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆ ಸಾಧ್ಯತೆ