ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ 'ಫನಿ' ಚಂಡಮಾರುತ ಹಾಗೂ ಸ್ಥಳೀಯ ಮಟ್ಟದ ಸುಳಿಗಾಳಿಯ ಪರಿಣಾಮದಿಂದ ನಗರದಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಕೆಲವೆಡೆ ಮರಗಳು ಧರೆಗೆ ಉರುಳಿದರೆ, ಗರುಡಾಚಾರಪಾಳ್ಯದಲ್ಲಿ ಕಾಂಪೌಂಡ್ ಕುಸಿದು ಶಿವಕೈಲಾಶ್ ರೆಡ್ಡಿ (30) ಎಂಬುವರು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರದವರು ಎಂದು ಗುರುತಿಸಲಾಗಿದೆ. ದೊಡ್ಡನೆಕ್ಕುಂದಿಯ ಖಾಸಗಿ ಕಂಪನಿ ಟೀಮ್ ಲೀಸ್‌ನಲ್ಲಿ ಉದ್ಯೋಗಿಯಾಗಿದ್ದರು. ಕೆಲಸ ಮುಗಿಸಿಕೊಂಡು ಸಂಜೆ 7.45ರ ಸುಮಾರಿಗೆ ಮನೆಗೆ ಹೋಗುತ್ತಿದ್ದಾಗ, ಗೋಶಾಲೆಗೆ ಸೇರಿದ ಕಾಂಪೌಂಡ್ ಕುಸಿದು ಅವರ ಮೇಲೆ ಬಿದ್ದಿತ್ತು. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಶಾಲೆಯವರು ನಿರ್ಮಿಸಿದ ಆಳೆತ್ತರದ ಕಾಂಪೌಂಡ್ ಕಳಪೆ ಮಟ್ಟದ್ದಾಗಿತ್ತು. ಆದ್ದರಿಂದ ಈ ಘಟನೆ ನಡೆಯಿತೆಂದು ಹೇಳಲಾಗುತ್ತಿದೆ. ಈ ದುರ್ಘಟನೆ ನಡೆದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಉಳಿದ ಕಾಂಪೌಂಡ್ ಭಾಗಗಳನ್ನು ಗರುಡಾಚಾರಪಾಳ್ಯ ವಾರ್ಡ್‌ನ ಪಾಲಿಕೆ ಸದಸ್ಯ ನಿತೀನ್ ಪುರುಷೋತ್ತಮ್ ತೆರವುಗೊಳಿದ್ದಾರೆ.
ಇಂದು ಘಟನಾ ಸ್ಥಳಕ್ಕೆ ಬೆಂಗಳೂರು ಮೇಯರ್ ಗಂಗಾಬಿಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಮೇಯರ್ ಗಂಗಾಬಿಕೆ, ಶಿವಕೈಲಾಶ್ ರೆಡ್ಡಿ ಗೋಶಾಲೆಯ ಸಮೀಪ ದೊಡ್ಡನೆಕ್ಕುಂದಿಯ ಟೀಮ್ ಲೀಸ್ ಸಂಸ್ಥೆಯಲ್ಲಿ ಹೆಚ್ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮದುವೆಗೆ 15 ದಿನಗಳು ಬಾಕಿ ಇರುವಾಗಲೇ ಸಾವನ್ನಪ್ಪಿದ್ದು ತುಂಬಾ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಗೋಶಾಲಾ ಟ್ರಸ್ಟ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪರಿಹಾರ ಸಂಬಂಧ ಕಮೀಷನರ್ ಜತೆ ಮಾತುಕತೆ ಮಾಡಲಾಗುತ್ತದೆ ಎಂದು ಹೇಳಿದರು. ಮರಣೋತ್ತರ ಪರಿಕ್ಷೇಗಾಗಿ ಬೌರಿಂಗ್ ಆಸ್ಪತ್ರೆಗೆ ರಾತ್ರಿಯೇ ಮೃತದೇಹ ರವಾನೆ ಮಾಡಲಾಗಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೇಯರ್ ತಿಳಿಸಿದರು.
ಕಾರ್ಪೊರೇಟರ್ ನಿತೀನ್ ಪುರುಷೋತ್ತಮ ಮಾತನಾಡಿ, ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಯಿತು. ಮೃತ ವ್ಯಕ್ತಿ ಸ್ಥಳೀಯ ಖಾಸಗಿ ಕಂಪನಿ ಹೆಚ್ಆರ್ ಆಗಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಳೆ ಹಾಗೂ ಗಾಳಿಯ ರಭಸಕ್ಕೆ ಗೋಶಾಲಾ ಟ್ರಸ್ಟ್‌ನ ಕಾಂಪೌಂಡ್ ಕುಸಿದು ಶಿವಕೈಲಾಶ್ ಅವರ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.