ಬೆಂಗಳೂರು: ನಿನ್ನೆ ಮಧ್ಯರಾತ್ರಿ ವೇಳೆಗೆ ಅಬ್ಬರಿಸಿದ್ದ ಮಳೆರಾಯ ಇನ್ನೂ ಕೂಡ ತನ್ನ ಆರ್ಭಟ ಮುಂದುವರೆಸಿದ್ದಾನೆ. ಇಂದು ಸಂಜೆಯಿಂದಲೇ ಧಾರಾಕಾರವಾಗಿ ಮಳೆ ಸುರಿದಿದೆ.
ಭಾರೀ ಮಳೆಗೆ ಇನ್ನೂರಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಇಂದು ಸಂಜೆ ಹಾಗೂ ರಾತ್ರಿ ವೇಳೆ ಸುರಿದ ಮಳೆಯಿಂದ ಪ್ರಯಾಣಿಕರಿಗೆ ಸಂಚಾರ ದುಸ್ತರವಾಗಿದೆ. ನಗರದ ಓಕಳೀಪುರಂ ಸೇರಿದಂತೆ ಹಲವಾರು ಅಂಡರ್ ಪಾಸ್ ಗಳಲ್ಲಿ ನೀರು ನಿಂತುಕೊಂಡಿದೆ. ದಕ್ಷಿಣ ಹಾಗೂ ಪಶ್ಚಿಮ ವಲಯಗಳಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ.
ಬೆಂಗಳೂರಿನಲ್ಲಿ ಸೆ.9 ರಿಂದ 13 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಎಲೋ ಅಲರ್ಟ್ ನೀಡಿದೆ. ನಿನ್ನೆ ಬೆಂಗಳೂರಿನಲ್ಲಿ ಹತ್ತು ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಮುನ್ಸೂಚನೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಸೆ.9 ರಿಂದ 13 ರವರೆಗೆ ಮಳೆಯಾಗಲಿದ್ದು, ರಾಜ್ಯದ ಕರಾವಳಿಯಲ್ಲಿ ಸಮುದ್ರಮಟ್ಟದಲ್ಲಿ ಟ್ರಫ್ ಇರುವುದರಿಂದ ಮಳೆಯಾಗುತ್ತಿದೆ. ದಕ್ಷಿಣ ಒಳನಾಡು, ಮಲೆನಾಡು, ಹಾಗೂ ಕರಾವಳಿ ಜಿಲ್ಲೆಗಳ ಹಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳ ಕೆಲವು ಭಾಗಗಳಿಗೆ ಸೆ.11 ರಂದು ರೆಡ್ ಅಲರ್ಟ್ ನೀಡಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ಜಲಾವೃತ:
ಮಹದೇವಪುರ, ದಾಸರಹಳ್ಳಿ, ಯಲಹಂಕ ಹಾಗೂ ಪೂರ್ವ ವಲಯದ 50 ವಾರ್ಡ್ ಗಳಲ್ಲಿ 100 ಮಿ.ಮೀಟರ್, 15 ವಾರ್ಡ್ ಗಳಲ್ಲಿ 140 ಮಿ.ಮೀಟರ್ ಮಳೆಯಾಗಿದ್ದು, 19 ಕ್ಕೂ ಹೆಚ್ಚು ತಗ್ಗುಪ್ರದೇಶಗಳಿಗೆ ಹೆಚ್ಚು ಹಾನಿಯಾಗಿದೆ. ಇಲ್ಲೆಲ್ಲ ಅಕ್ರಮವಾಗಿ 240 ಅಡಿಗಳ ಉದ್ದದ ಜಾಗದಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ನಾಳೆಯೇ ತೆರವು ಮಾಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಹೆಬ್ಬಾಳ ವ್ಯಾಲಿ ಒತ್ತುವರಿಯಾಗಿರುವುದರಿಂದ ಹೆಣ್ಣೂರು ಕೆಪಿಟಿಸಿಎಲ್ ಹಾಗೂ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿ ನೀರು ತುಂಬಿಕೊಂಡಿದೆ. ವಾಹನ ಸವಾರರು ಹಾಗೂ ನಡಿಗೆದಾರರು ಪರದಾಡುವಂತಾಯ್ತು.