ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇನ್ನು ಕೆಲವು ಕಡೆ ರಸ್ತೆಗಳೇ ಕಾಣದಂತೆ ಜಲಾವೃತವಾಗಿವೆ. ಇತ್ತ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದರು. ಶಿವಾನಂದ ಸರ್ಕಲ್ ಸಮೀಪದ ರೈಲ್ವೆ ಅಂಡರ್ ಪಾಸ್ನಲ್ಲೂ ಮೊಣಕಾಲು ಉದ್ದ ನೀರು ಹರಿಯುತ್ತಿತ್ತು.
ದಕ್ಷಿಣಾ ವಿಭಾಗ ವ್ಯಾಪ್ತಿಯ ಹೊಸಕೆರೆಹಳ್ಳಿಯಲ್ಲಿ ಕೆರೆ ಏರಿ ಒಡೆದ ಪರಿಣಾಮ ಪುಷ್ಪಗಿರಿ ಲೇಔಟ್ ಮನೆಗಳಿಗೆ ನೀರು ನುಗ್ಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಡಿಸಿಪಿಯವರಿಗೆ ಗಿರಿನಗರ ಠಾಣಾ ಪೊಲೀಸರು ಹಾಗೂ ಸ್ಥಳೀಯರು ಸಾಥ್ ನೀಡಿ ಮಳೆ ನೀರನ್ನ ಮನೆಗಳಿಂದ ಹೊರ ಹಾಕಿದ್ದಾರೆ. ಕೆರೆ ಕೋಡಿ ಒಡೆದ ಸ್ಥಳಕ್ಕೆ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಬಿಬಿಎಂಪಿ ತುರ್ತು ಸಭೆ: ರಾಜಧಾನಿಯಲ್ಲಿ ಮಳೆ ಹಾನಿ ಹಿನ್ನೆಲೆಯಲ್ಲಿ ನಾಳೆ ಬಿಬಿಎಂಪಿಯಲ್ಲಿ ತುರ್ತು ಸಭೆ ಕರೆಯಲಾಗಿದೆ. ಮೇಯರ್ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಲಿದ್ದು, ಬಿಬಿಎಂಪಿ, ಬಿಡ್ಲೂಎಸ್ಎಸ್ಬಿ, ಬಿಡಿಎ, ಬಿಎಂಆರ್ಸಿಎಲ್, ಬಿಎಂಆರ್ಡಿಎ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.