ಬೆಂಗಳೂರು: ಸ್ಕೂಟರ್ ಕಳ್ಳತನವಾಗಿರುವ ಸಿಸಿಟಿವಿ ದೃಶ್ಯ ನೋಡುತ್ತಿರುವಾಗ ಮಹಿಳೆಗೆ ಹೃದಯಾಘಾತವಾದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕತ್ರಿಗುಪ್ಪೆ ಕಾವೇರಿ ನಗರದ ನಿವಾಸಿ ಮಮತಾ ಹೃದಯಾಘಾತಕ್ಕೊಳಗಾದವರು. ಜಯನಗರದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿರುವ ಇವರು, ಹೊಂಡಾ ಆ್ಯಕ್ಟಿವಾ ಸ್ಕೂಟರ್ನಲ್ಲಿ ಜುಲೈ 13 ರಂದು ವಿಠಲ ನಗರದ ಗೌರಿಶಂಕರ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದರು. ದೇವಸ್ಥಾನ ಹೊರಗೆ ಸ್ಕೂಟರ್ ನಿಲ್ಲಿಸಿ ಒಳಗಡೆ ಹೋಗಿ ಬರುವಷ್ಟರಲ್ಲಿ ಇವರ ಸ್ಕೂಟರ್ ಕಾಣೆಯಾಗಿತ್ತು. ಗಲಿಬಿಲಿಗೊಂಡು ದೇವಸ್ಥಾನ ಮುಂಭಾಗದ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳನ ಕರಾಮತ್ತು ಬಯಲಾಗಿತ್ತು.
ದೇವಸ್ಥಾನ ಒಳಗಡೆ ಮಮತಾ ಹೋಗುವುದನ್ನು ಗಮನಿಸಿ ಅವರೊಂದಿಗೆ ಒಳ ಪ್ರವೇಶಿಸಿದ ವ್ಯಕ್ತಿಯೊಬ್ಬ ಕೀ ಎಗರಿಸಿ ಹೊರಗಡೆಯಿದ್ದ ಸ್ಕೂಟರ್ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ನೋಡುತ್ತಿದ್ದಂತೆ ಮಹಿಳೆಗೆ ಹೃದಾಯಘಾತವಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಮಮತಾ ಚೇತರಿಸಿಕೊಂಡಿದ್ದಾರೆ.
ಈ ಕುರಿತು ಮಮತಾ ಅವರ ಪತಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.