ಬೆಂಗಳೂರು : ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ನಿಯಮಗಳನ್ನು ರೂಪಿಸಿ ನ್ಯಾಯಾಲಯದ ಒಪ್ಪಿಗೆ ಪಡೆಯುವವರೆಗೆ ಜಾನುವಾರುಗಳನ್ನು ಸಾಗಣೆ ಮಾಡುವವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟನೆ ನೀಡಿದೆ.
ಗೋಹತ್ಯೆ ಪ್ರತಿಬಂಧಕ ಸುಗ್ರೀವಾಜ್ಞೆ ರದ್ದು ಕೋರಿ ನಗರದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಸೆಕ್ಷನ್ 5ರ ಪ್ರಕಾರ ಜಾನುವಾರುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುವುದಕ್ಕೆ ನಿರ್ಬಂಧಗಳಿವೆ. ಇದು ರೈತರು ತಮ್ಮ ಜಾನುವಾರುಗಳನ್ನು ಕೃಷಿ ಕೆಲಸಗಳಿಗೆ, ಹೈನುಗಾರಿಕೆಗೆ ಸಾಗಿಸುವುದಕ್ಕೂ ಅಡ್ಡಿಯಾಗಿದೆ ಎಂದಿತು.
ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಕಾಯ್ದೆಗೆ ನಿಯಮಗಳನ್ನು ರೂಪಿಸುವವರೆ ಸೆಕ್ಷನ್ 5ರ ಅಡಿ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಸಿಬಿಐ ಅಧಿಕಾರಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳಿಂದಲೇ ದಾಳಿ!
ಹೇಳಿಕೆ ದಾಖಲಿಸಿಕೊಂಡ ಪೀಠ, ಹಾಗಿದ್ದರೆ ಈ ಹಂತದಲ್ಲಿ ಸುಗ್ರೀವಾಜ್ಞೆಗೆ ತಡೆ ಕೋರಿರುವ ಮಧ್ಯಂತರ ಮನವಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಹಾಗೆಯೇ, ಅರ್ಜಿಗೆ ಅಕ್ಷೇಪಣೆಯನ್ನು ಫೆಬ್ರವರಿ 20ರೊಳಗೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.