ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಪ್ರಕರಣದ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ತುರ್ತು ಸಭೆ ನಡೆಯಿತು. ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಆಯುಕ್ತರಾದ ಸಂದೀಪ್ ಪಾಟೀಲ್ ಹಾಗೂ ಸುಬ್ರಹ್ಮಣ್ಯೇಶ್ವರ್ ರಾವ್, ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಹಾಗೂ ಕೆಲ ಮುಸ್ಲಿಂ ಧಾರ್ಮಿಕ ಮುಖಂಡರುಗಳು ಭಾಗಿಯಾಗಿದ್ದರು.
ಸುಪ್ರೀಂ ಕೋರ್ಟ್‌ನಲ್ಲಿ ಈದ್ಗಾ ಮೈದಾನದ ವಿಚಾರವಾಗಿ ತೀರ್ಪು ಬರುವ ಸಾಧ್ಯತೆಯಿದ್ದು ಬಂದೋಬಸ್ತ್ ವಿಚಾರವಾಗಿ ಸಭೆಯಲ್ಲಿ ಚರ್ಚಿಸಲಾಗಿದೆ. ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಕ್ಸೂದ್ ಇಮ್ರಾನ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಹಿಂದೂವಾಗಲಿ, ಮುಸ್ಲಿಂ ಆಗಲಿ ನ್ಯಾಯಾಲಯದ ತೀರ್ಪು ಗೌರವಿಸಬೇಕು. ಆದರೆ, ಮೊದಲೊಮ್ಮೆ ಸುಪ್ರಿಂ ಕೋರ್ಟ್ ಇದು ಮುಸ್ಲಿಂ ಈದ್ಗಾ ಎಂದೇ ತೀರ್ಪು ನೀಡಿದೆ. ಆದ್ದರಿಂದ ಕೋರ್ಚ್ ಮೊದಲು ನೀಡಿರುವ ತೀರ್ಪನ್ನು ಗೌರವಿಸೋಣ ಎಂದು ಕಂದಾಯ ಸಚಿವರಿಗೆ, ಜನತೆಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.
ಪೊಲೀಸರಿಂದ ಪಥಸಂಚಲನ: ಗೌರಿ-ಗಣೇಶ ಹಬ್ಬ ಸಂಭ್ರಮದ ಬೆನ್ನಲ್ಲೇ ನಗರದಲ್ಲಿ ನಗರದ ಪಶ್ಚಿಮ ವಿಭಾಗದ ಪೊಲೀಸರು ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಿದರು. ಕಾನೂನು ಸುವ್ಯವಸ್ಥೆ ಮೇಲೆ ನಿಗಾವಹಿಸಲು ಹಾಗೂ ಸಮಾಜದ ಶಾಂತಿ ಭಂಗವುಂಟು ಮಾಡುವವರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಹತ್ತಕ್ಕೂ ಹೆಚ್ಚು ಠಾಣಾ ಪೊಲೀಸರು, ಕೆ.ಎಸ್.ಆರ್.ಪಿ ಸಿಬ್ಬಂದಿ, ಕ್ವಿಕ್ ರಿಯಾಕ್ಷನ್ ಟೀಂ, ಡಿ ಸ್ವಾಟ್ ಸೇರಿದಂತೆ 300ಕ್ಕೂ ಹೆಚ್ಚು ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು
ಇದನ್ನೂ ಓದಿ:ಭರತನಗರಿ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಆರೋಪ: ಬರಗೂರು ವಿರುದ್ಧ ಬಿಜೆಪಿ ದೂರು