ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೋವು ತಂದಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಒಬ್ಬ ನಾಯಕರು ಹೇಳುವ ಮಾತು ಅಲ್ಲ. ಸಿದ್ದರಾಮಯ್ಯ ಸರ್ಕಾರ ನಡೆಸಿದವರು. ನಾಯಕರಾದವರು ಜವಾಬ್ದಾರಿಯಿಂದ ಮಾತನಾಡಬೇಕು. ಈ ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ತನಿಖೆಗೆ ಸೂಚಿಸಿದ್ದೇನೆ. ಸಾವು ಸಾವೇ, ಅದರ ಸಂಪೂರ್ಣ ಹೊಣೆಗಾರಿಕೆ ತೆಗೆದುಕೊಳ್ಳುತ್ತೇನೆ. ಮುಂದೆ ಯಾವುದೇ ಆಸ್ಪತ್ರೆಯಲ್ಲಿ ಈ ರೀತಿ ಆಗದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಎಂದು ತಿಳಿಸಿದರು.
2017ರಲ್ಲಿ ಸಿದ್ದರಾಮಯ್ಯ ಕೆಪಿಎಂಇ ಕಾಯಿದೆ ತರಲು ಹೊರಟಿದ್ದಾಗ ವೈದ್ಯರು ಮೂರು ದಿನ ಬಂದ್ ನಡೆಸಿದ್ದರು. ಆಗ 70ರಿಂದ 80 ಜನ ಸಾವಾಗಿತ್ತು. ಇದಕ್ಕೆ ಸಿದ್ದರಾಮಯ್ಯ ಜವಾಬ್ದಾರಿ ಅಂತಾ ನಾನು ಹೇಳಬಹುದಾ?. ಸ್ಪೀಕರ್ ಅನುಮತಿ ಕೊಟ್ಟರೆ ಸದನದಲ್ಲಿ ಇದನ್ನು ಪ್ರಸ್ತಾಪ ಪಡಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ವಿಮ್ಸ್ಗೆ ಆಗಮಿಸಿದ ವೈದ್ಯೆ ಸ್ಮಿತಾ ನೇತೃತ್ವದ ತನಿಖಾ ಸಮಿತಿ: ಮಾಹಿತಿ ಸಂಗ್ರಹ
ನಿರ್ದೇಶಕರನ್ನು ಕೆಳಗಿಳಿಸಲು ಉದ್ದೇಶ ಪೂರ್ವಕ ಪವರ್ ಕಟ್ ಎಂಬ ವಿಮ್ಸ್ ನಿರ್ದೇಶಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಮ್ಸ್ ಆಸ್ಪತ್ರೆ ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆ ಮಾಹಿತಿಯನ್ನು ನಾನು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ.
ಬೆಸ್ಕಾಂ ಅಭಿಪ್ರಾಯವೂ ತೆಗೆದುಕೊಳ್ಳುತ್ತಿದ್ದಾರೆ. ಇದು ಬಹಳ ಸೂಕ್ಷ್ಮ ವಿಚಾರ. ಅಂತಿಮವಾಗಿ ತನಿಖೆ ವರದಿ ಬಂದ ಬಳಿಕ ಸದನದಲ್ಲಿ ವರದಿಯನ್ನು ಇಡುತ್ತೇವೆ ಎಂದರು.
ಜವಾಬ್ದಾರಿಯಿಂದ ಮಾತನಾಡಬೇಕು: ಇದೇ ವೇಳೆ, ಶಾಸಕ ಸೋಮಶೇಖರ ರೆಡ್ಡಿ ಅವರು ನಿರ್ದೇಶಕರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ವಿಮ್ಸ್ ನಿರ್ದೇಶಕರ ನೇಮಕ ನಿಯಮದಂತೆ ಆಗಿದೆ. ನಿರ್ದೇಶಕರನ್ನು ನಾನು ನೇಮಕ ಮಾಡಿಲ್ಲ. ಸರ್ಕಾರದ ನಿಬಂಧನೆಗಳ ಅನ್ವಯ ಅರ್ಹರನ್ನು ಸಂದರ್ಶನ ಮೂಲಕ ನಿರ್ದೇಶಕರನ್ನು ಸಮಿತಿ ನೇಮಿಸುತ್ತದೆ.
ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್, ಶಾಸಕ ಕರುಣಾಕರರೆಡ್ಡಿ ಇದ್ದಾರೆ. ನಿರ್ದೇಶಕರ ನೇಮಕ ಯಾವ ರೀತಿ ಆಗಿದೆ ಅಂತ ಅವರನ್ನು ಕೇಳಲಿ. ಸೋಮಶೇಖರ್ ರೆಡ್ಡಿ ಜವಾಬ್ದಾರಿಯಿಂದ ಮಾತನಾಡಬೇಕಾಗುತ್ತದೆ ಎಂದು ಸುಧಾಕರ್ ಸಿಟ್ಟಿನಿಂದಲೇ ಹೇಳಿದರು.
ಇದನ್ನೂ ಓದಿ: ಬಳ್ಳಾರಿ ವಿಮ್ಸ್ನಲ್ಲಿ ರೋಗಿಗಳ ಸಾವು ಪ್ರಕರಣ: ಅಧೀಕ್ಷಕ ಸೇರಿ ಐವರಿಗೆ ನೋಟಿಸ್ ಜಾರಿ
ಸುಧಾಕರ್ ವಿರುದ್ಧ ಸಿದ್ದರಾಮಯ್ಯ ಗರಂ: ಮತ್ತೊಂದೆಡೆ ಬಳ್ಳಾರಿ ವಿಮ್ಸ್ಗೆ ಆರೋಗ್ಯ ಸಚಿವ ಸುಧಾಕರ್ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಭೇಟಿ ಕೊಡಬೇಕಿತ್ತು. ಆರೋಗ್ಯ ಸಚಿವರು ಬೆಂಗಳೂರಿನಲ್ಲೇ ಇದ್ದಾರೆ. ಯಾವ ಸಚಿವರೂ ವಿಮ್ಸ್ ಆಸ್ಪತ್ರೆಗೆ ಹೋಗಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ತಪ್ಪಿತಸ್ಥರ ಮೇಲೆ ಕ್ತಮ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಸಚಿವ ಶ್ರೀರಾಮುಲು ಸುಳ್ಳು ಹೇಳಿದ್ದಾರೆ. ಒಟ್ಟಾರೆ 5 ಜನ ಸತ್ತಿದ್ದಾರೆ. ಮೂವರು ಮೃತರ ಕುಟುಂಬಕ್ಕೆ ಕೇವಲ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಳ್ಳಾರಿ ವಿಮ್ಸ್ನಲ್ಲಿ ಆರಕ್ಕೇರಿದ ಸಾವಿನ ಪ್ರಕರಣ.. ಮೃತಪಟ್ಟವರ ವಿಡಿಯೋ ವೈರಲ್.. ತನಿಖಾ ತಂಡದ ಭೇಟಿ