ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಟ್ವೀಟ್ಗೆ ಆರೋಗ್ಯ ಸಚಿವ ಶ್ರೀರಾಮುಲು ಮರು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿಯವರು ಕೊರೊನಾ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಮರು ಟ್ವೀಟ್ ಮಾಡಿರುವ ರಾಮುಲು, ಕುಮಾರಸ್ವಾಮಿಯವರೇ, ನಾನು ಹಾಗೂ ಸುಧಾಕರ್ ಅವರು ಜೊತೆ ಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ತಮ್ಮ ಗೊಂದಲದಲ್ಲಿ ಯಾವುದೇ ಹುರುಳಿಲ್ಲ. ಇತ್ತೀಚೆಗೆ ಹೆಚ್ಚಾಗಿ ಗೊಂದಲದಲ್ಲಿರುವ ತಾವು, ಜನರನ್ನು ಗೊಂದಲಕ್ಕೆ ದೂಡುವ ಕೆಲಸಕ್ಕೆ ಕೈಹಾಕದಿರಿ ಎಂದು ವಿನಂತಿಸುತ್ತೇನೆ ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.