ಬೆಂಗಳೂರು: ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಗಾಂಧಿನಗರ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಜಾಗೃತವಾಗಿ ಕಾಯಿಲೆಗಳನ್ನು ತಡೆಗಟ್ಟುವುದು ಬಹುಮುಖ್ಯ. ಜನರ ಜೀವನ ಶೈಲಿ ಬದಲಾದಂತೆ ಇವತ್ತಿನ ದಿನಮಾನಗಳಲ್ಲಿ ಬಿಪಿ, ಶುಗರ್, ಕ್ಯಾನ್ಸರ್, ಕಿಡ್ನಿ ಸಮಸ್ಯೆಯಂತಹ ಕಾಯಿಲೆಗಳು ಕಾಡುತ್ತಿವೆ. ಈ ಕಾಯಿಲೆಗಳನ್ನು ಮೊದಲೇ ಪತ್ತೆ ಹಚ್ಚಿದರೇ, ಚಿಕಿತ್ಸೆಯ ಮೂಲಕ ಆರಂಭದಲ್ಲೇ ಗುಣಪಡಿಸಬಹುದು. ಹೀಗಾಗಿ ಉಚಿತ ಆರೋಗ್ಯ ಶಿಬಿರಗಳು ಹೆಚ್ಚು ಅವಶ್ಯಕವಾಗಿದ್ದು, ಜನಸಾಮಾನ್ಯರಿಗೆ ಸದುಪಯೋಗವಾಗಲಿವೆ ಎಂದು ಸಚಿವ ಗುಂಡೂರಾವ್ ತಿಳಿಸಿದರು.
ಹಠಾತ್ ಹೃದಯಾಘಾತ ತಡೆಯುವ ನಿಟ್ಟಿನಲ್ಲಿ ದಿ. ನಟ ಪುನೀತ್ ರಾಜಕುಮಾರ್ ಹೆಸರಲ್ಲಿ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಜೆಟ್ನಲ್ಲಿ ಘೋಷಣೆ ಮಾಡಿದಂತೆ 'ಅಪ್ಪು ಯೋಜನೆ' ಜಾರಿಗೆ ತರುತ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದರೆ, ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಗೋಲ್ಡನ್ ಟೈಮ್ನಲ್ಲಿ ಚಿಕಿತ್ಸೆ ಬಳಿಕ ಆಸ್ಪತ್ರೆಗೆ ಸ್ಥಳಾಂತರ ಮಾಡಬಹುದು. ರೋಗಿಯನ್ನು ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಹೃದಯಾಘಾತಕ್ಕೆ ಔಷಧಿ: ಹೃದಯಾಘಾತದ ಸಮಯದಲ್ಲಿ ಆಸ್ಪತ್ರೆಗೆ ರವಾನಿಸುವ ವೇಳೆಯಲ್ಲಿಯೇ ಸಾವು ಸಂಭವಿಸುತ್ತದೆ. ಈ ಕಾರಣಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಹೃದಯಾಘಾತ ತಪ್ಪಿಸಲು ಮೆಡಿಸಿನ್ಗಳನ್ನು ಪೂರೈಸಲಾಗುವುದು. ಹೃದಯಾಘಾತದ ಸೂಚನೆ ಬಂದರೆ ತಕ್ಷಣ ಸಂಬಂಧಿಸಿದ ಔಷಧಿ ನೀಡಿ, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗೆ ರವಾನಿಸಲಾಗುವುದು. ಎರಡು ವಾರಗಳಲ್ಲಿ ಈ ಬಗ್ಗೆ ಟೆಂಡರ್ ಕರೆದು ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವರು ವಿವರಿಸಿದರು.
ಇದೇ ವೇಳೆ, ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾತನಾಡಿ, ಗಾಂಧಿನಗರ ಆರೋಗ್ಯ ಶಿಬಿರ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಳ್ಳುವ ಉಚಿತ ಆರೋಗ್ಯ ಶಿಬಿರಗಳಿಗೆ ಒಂದು ಮುನ್ನುಡಿಯಾಗಿದೆ. ಆರೋಗ್ಯ ಶಿಬಿರಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನ ಸುವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಬಿ.ಪಿ, ಶುಗರ್, ಕಣ್ಣಿನ ತಪಾಸಣೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೂ ಇಸಿಜಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಆರೋಗ್ಯ ಇಲಾಖೆಯ ಎಲ್ಲ ಚಿಕಿತ್ಸೆಗಳು ಶಿಬಿರದ ಮೂಲಕ ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಇದು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಶಿಬಿರಕ್ಕೆ ಜನರ ದಂಡು: ಈ ಆರೋಗ್ಯ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡಿ ತಪಾಸಣೆ, ಉಚಿತ ಚಿಕಿತ್ಸೆಯ ಲಾಭ ಪಡೆದರು. ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ಹಿಡಿದು, ಸ್ತ್ರೀ ರೋಗ ಸಮಸ್ಯೆ, ಮಕ್ಕಳ ಆರೋಗ್ಯ, ಕಿಲು ಮತ್ತು ಮೂಳೆ ಚಿಕಿತ್ಸೆ, ನರ ಸಮಸ್ಯೆ, ಹೃದಯ ಚಿಕಿತ್ಸೆ, ಚರ್ಮದ ಸಮಸ್ಯೆ, ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್, ಕಣ್ಣು, ಹಲ್ಲು, ಕಿಡ್ನಿ ಚಿಕಿತ್ಸೆಗಳನ್ನು ಒದಗಿಸಲಾಯಿತು. 16 ಕೌಂಟರ್, 10 ಫಾರ್ಮಸಿ ಸೆಂಟರ್ಗಳಲ್ಲಿ 100ಕ್ಕೂ ಹೆಚ್ವು ತಜ್ಞ ವೈದ್ಯರು, 3 ಕೋಟಿ ಮೌಲ್ಯದ ಔಷಧಿಗಳನ್ನು ಶಿಬಿರಕ್ಕೆ ಕಲ್ಪಿಸಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪಗೆ ಅರಸು ಪ್ರಶಸ್ತಿ ಪ್ರದಾನ