ಬೆಂಗಳೂರು : ಮೆಟ್ರೋ ರೈಲು ಸಂಚಾರ ಇಂದಿನಿಂದ ಆರಂಭವಾಗಿದ್ದು, ಎಲ್ಲ ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನಸೌಧ ಬಳಿಯ ಮೆಟ್ರೋ ನಿಲ್ದಾಣಕ್ಕೆ ಇಂದು ಸಂಜೆ ಭೇಟಿ ನೀಡಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಪ್ರಯಾಣಿಕರು ಆತಂಕಪಡುವ ಅಗತ್ಯ ಇಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೆಟ್ರೋ ರೈಲಿನಲ್ಲಿಯೂ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಇದರ ಜೊತೆಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಎಲ್ಲದರ ಬಗ್ಗೆಯೂ ಮುಂಜಾಗ್ರತಾ ಕ್ರಮಗಳನ್ನು ಮೆಟ್ರೋ ಕೈಗೊಂಡಿದೆ. ಪ್ರಯಾಣಿಕರು ಆತಂಕಪಡದೆ ಪ್ರಯಾಣಿಸಬಹುದು ಎಂದರು.
ನಮ್ಮ ಪ್ರಾಣ ನಮ್ಮ ಕೈಯಲ್ಲಿದೆ. ಹಾಗಾಗಿ, ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಮೆಟ್ರೋದಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿಕೊಂಡು ಸ್ಯಾನಿಟೈಸರ್ ಬಳಸಬೇಕು ಎಂದು ಸಲಹೆ ಮಾಡಿದರು.
ಐದು ತಿಂಗಳ ನಂತರ ಮೆಟ್ರೋ ರೈಲು ಆರಂಭವಾಗಿದೆ. ಆರು ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರು ಪ್ರಯಾಣಿಸಬಹುದು ಎಂದರು.
ಯಾವಾಗ ನಮ್ಮ ಮೆಟ್ರೋ ಸೇವೆ ಶುರುವಾಗುತ್ತೆ ಎಂಬ ಯೋಚನೆಯಲ್ಲಿದ್ದ ಪ್ರಯಾಣಿಕರಿಗೆ ಇದರಿಂದ ನಿರಾಳ ತಂದಿದೆ. ಇನ್ನು ಸಂಚಾರ ಆರಂಭವಾದ ಮೊದಲ ದಿನ ಇಂದು ಆರೋಗ್ಯ ಸಚಿವ ಶ್ರೀರಾಮುಲು ಅದರಲ್ಲಿ ಸವಾರಿ ಮಾಡುವ ಮೂಲಕ ಗಮನ ಸೆಳೆದರು.