ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಮೂರನೇ ಅಲೆ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ನೂತನವಾಗಿ ಕೋವಿಡ್ ಪರೀಕ್ಷೆಗೆ ನಿಯಮ ರೂಪಿಸಿದ್ದು, ಜಿಲ್ಲಾವಾರು ಟಾರ್ಗೆಟ್ ಹೆಚ್ಚಿಸಲು ಶಿಫಾರಸು ಮಾಡಿದೆ.
ಹೆಚ್ಚಿನ ಪ್ರಮಾಣದಲ್ಲಿ RT-PCR ಹಾಗೂ RAT ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಶೇ. 30% ಆರ್ಎಟಿ ಮೂಲಕ ಪರೀಕ್ಷೆ ಮಾಡಬೇಕು, ಉಳಿದಂತೆ ಶೇ.70% ಆರ್ಟಿಪಿಸಿಆರ್ ಪರೀಕ್ಷೆ ಮಾಡುವಂತೆ ತಿಳಿಸಲಾಗಿದೆ.
ಒಟ್ಟು ಪರೀಕ್ಷೆಗಳಲ್ಲಿ 10% ಅನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಮಾಡಬೇಕು. ಜೊತೆಗೆ 50% ಪರೀಕ್ಷೆಗಳನ್ನು ತಾಲೂಕು ಕೇಂದ್ರ ಪ್ರದೇಶದ ಹೊರಭಾಗದಲ್ಲಿ ನಡೆಸಲು ಕಾರ್ಯತಂತ್ರ ರೂಪಿಸಬೇಕು. 15-18 ವರ್ಷ ವಯಸ್ಸಿನ ರೋಗ ಲಕ್ಷಣದ ಮಕ್ಕಳನ್ನು ಕಡ್ಡಾಯವಾಗಿ RAT ಪರೀಕ್ಷೆಗೆ ಒಳಪಡಿಸಬೇಕು ಎಂದು ಆದೇಶಿಸಲಾಗಿದೆ. ಪಾಸಿಟಿವಿಟಿ ದರ ಕಡಿಮೆ ಇರುವ ಕಡೆ (Pooling) ಪೂಲಿಂಗ್ ಟೆಸ್ಟ್ ಮಾಡುವಂತೆಯೂ ಸೂಚನೆ ನೀಡಲಾಗಿದೆ.
ಪ್ರಮುಖವಾಗಿ ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪರೀಕ್ಷೆ ನಡೆಸಬೇಕು. ಅಂತಾರಾಜ್ಯ ಗಡಿಗಳಿಂದ ಆಗಾಗ ಭೇಟಿ ನೀಡುವ ಜನರನ್ನು ಕೂಡ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಲಾಗಿದೆ.