ಆನೇಕಲ್: ಕೊರೊನಾ ಪಾಸಿಟಿವ್ ದೃಢವಾದರೆ ಅದಕ್ಕೆಂದೇ ಆರೋಗ್ಯ ಇಲಾಖೆ ಸುರಕ್ಷತಾ ನಿಯಮಗಳನ್ನು ಕೈಗೊಂಡಿದೆ. ಪಾಸಿಟಿವ್ ಬಂದ ವ್ಯಕ್ತಿಯನ್ನು ಸುರಕ್ಷಿತವಾಗಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸುವ ವ್ಯವಸ್ಥೆ ಕಲ್ಪಿಸಬೇಕು. ಅದೂ ಆರೋಗ್ಯ ಇಲಾಖೆಯ ನಿಗದಿತ ಆಸ್ಪತ್ರೆಯಲ್ಲಿ ಎಂದು ನಿಯಮ ಮಾಡಿ ಈವರೆಗೆ ಅದರಂತೆಯೇ ನಡೆದುಕೊಂಡಿದೆ.
ಆದರೆ ಈಗ ಸೋಂಕು ಪತ್ತೆಯಾದರೂ ಓರ್ವ ಮಹಿಳೆಯನ್ನ ಇಡೀ ದಿನ ಮನೆಯಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಆನೇಕಲ್ನ ಬಿಆರ್ಎನ್ ಆಶಿಶ್ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಮಧ್ಯಾಹ್ನವೇ 51 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿತ್ತು. ಇದರಿಂದಾಗಿ ಸುತ್ತಮುತ್ತಲ ಮನೆಯವರು ದೂರುತ್ತಿದ್ದು, ಆತಂಕದಲ್ಲಿದ್ದಾರೆ. ಸ್ಥಳೀಯ ನಾಗರಿಕರು ಪಾಸಿಟಿವ್ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ತಾಲೂಕು ವೈದ್ಯಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎನ್ನಲಾಗಿದೆ.
ಇಲ್ಲಿಯವರೆಗೂ ಆಕೆಯ ಮನೆ ಬಳಿ ಆರೋಗ್ಯ ಇಲಾಖೆ ಅಧಿಕಾರಿಗಳು ಸುಳಿದಿಲ್ಲ. ಸೋಂಕಿತ ಮಹಿಳೆ ಕೆಎಸ್ಆರ್ಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಲೇಔಟ್ನಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಆತಂಕ ಶುರುವಾಗಿದೆ. ಇದರಿಂದ ಮನೆಯಿಂದ ಹೊರ ಬಾರದೆ ಭಯದಲ್ಲಿರುವ ನಿವಾಸಿಗಳು, ಆರೋಗ್ಯಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.