ಬೆಂಗಳೂರು : ಅಧಿಕಾರದಲ್ಲಿದ್ದಾಗಲೇ ಮತ್ತೆ ಅಧಿಕಾರ ನೀಡದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ಅರ್ಧಚಂದ್ರ ಪ್ರಯೋಗ ಮಾಡಿದರು. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕೇವಲ ಭ್ರಮೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜನ ಕಲ್ಯಾಣಕ್ಕೆ ದೂರದೃಷ್ಟಿಯ ಕಾರ್ಯಸಾಧ್ಯವಾದ ಯೋಜನೆಗಳನ್ನು ರೂಪಿಸುವಲ್ಲಿ ಎಡವಿದ್ದ ಸಿದ್ದರಾಮಯ್ಯ ಅಗ್ಗದ ಯೋಜನೆಗಳ ಮೂಲಕ ಜನರ ತುಟಿಗೆ ತುಪ್ಪ ಸವರುವ ಆಡಳಿತಕ್ಕೆ ಕಳೆದ ಬಾರಿ ತಕ್ಕ ಶಾಸ್ತಿ ಮಾಡಿದ್ದರು. ಇವರ ದುರಾಡಳಿತವನ್ನು ಜನತೆ ಇನ್ನೂ ಮರೆತಿಲ್ಲ. ಉಪಚುನಾವಣೆಯಲ್ಲೂ ಕಾಂಗ್ರೆಸ್ಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಯಾರನ್ನು ಯಾರು ಎಲ್ಲಿಗೆ ಕಳುಹಿಸಿದರು? ಸ್ವಾರ್ಥ ರಾಜಕಾರಣಕ್ಕಾಗಿ ಮೂಲ ಕಾಂಗ್ರೆಸ್ಸಿಗರ ಮೇಲೆ ಯಾರು ಸವಾರಿ ಮಾಡುತ್ತಿದ್ದಾರೆ? ಎಂಬುದನ್ನು ತಿಳಿಯದಷ್ಟು ಜನ ಪೆದ್ದರಲ್ಲ. ನಮ್ಮ ಮೂವರು ಶಾಸಕರು ಪಕ್ಷದಿಂದ ಹೊರ ಹೋಗಲು ನಡೆದ ಸಂಚಿನಲ್ಲಿ ಹಣದ, ಅಧಿಕಾರದ ಆಮಿಷ ಮಾತ್ರವಲ್ಲ. ಕೆಲವರ 'ಕೈ'ವಾಡ ಕೂಡ ಕಾರಣ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಹತ್ತಾರು ಮಂದಿಯ ಪೈಕಿ 'ಎದೆ ಸೀಳಿದರೆ ಸಿದ್ದು ಕಾಣುತ್ತಾರೆ' ಎಂಬ ಅನುಯಾಯಿಗಳು ಬಿಜೆಪಿಗೆ ಹಾರಲು ಮಸಲತ್ತು ನಡೆಸಿದವರು ಯಾರೆಂಬುದು 'ಸಿದ್ಧವನ'ದಲ್ಲಿ ಕುಳಿತಿದ್ದ 'ರಾಮ'ನಿಗೂ ಗೊತ್ತಿತ್ತು ಎಂದು ಟೀಕಿಸಿದ್ದಾರೆ.
ಮೈತ್ರಿ ಸರ್ಕಾರ ತೆಗೆಯಲು ಅಳಲೇಕಾಯಿ ಪಂಡಿತನಂತೆ ಔಷಧ ಅರೆದ ವ್ಯಕ್ತಿಗೆ ನಮ್ಮ ಮೂವರು ಶಾಸಕರು ಕದ್ದು ಓಡಿ ಹೋದರೋ? ನಾವೇ ಕತ್ತು ಹಿಡಿದು ನೂಕಿದವೋ? ಎಂದು ಗೊತ್ತಿಲ್ಲದ ಜಾಣ ಪೆದ್ದನಾಗಿದ್ದು ವಿಪರ್ಯಾಸ ಎಂದು ಹೆಚ್ಡಿಕೆ ಕುಟುಕಿದ್ದಾರೆ.