ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್. ಡಿ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿಯವರನ್ನ ಶಾಸಕಾಂಗ ಪಕ್ಷದ ನಾಯಕನಾಗಿ ಶಾಸಕರೆಲ್ಲಾ ಒಮ್ಮತದಿಂದ ಆಯ್ಕೆ ಮಾಡಿದರು.
ನೂತನವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ನಾವು ಕೊಟ್ಟ ಮಾತನ್ನು ತಪ್ಪೋದಿಲ್ಲ ಅನ್ನೋ ವೀರಾವೇಶದ ಮಾತನ್ನ ಸಿಎಂ ಆಡಿದ್ದರು. 200 ಯೂನಿಟ್ ಎಲ್ಲರಿಗೂ ಫ್ರೀ, ಫ್ರೀ ಅಂತ ಹೇಳಿ ಈಗ ಗೈಡ್‌ಲೈನ್ ಮಾಡ್ತೀವಿ ಅಂತಿದ್ದಾರೆ. ಅವತ್ತು ವೀರಾವೇಶದ ಮಾತನಾಡಿ, ಚಪ್ಪಾಳೆ ಹೊಡಿಸಿದ್ದೆ, ಹೊಡಿಸಿದ್ದು. ಈಗ ಏನು ಹೇಳ್ತಿದ್ದಾರೆ?. ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್‌ನಲ್ಲೇ ಎಲ್ಲಾ ಯೋಜನೆಗಳನ್ನು ಉಚಿತ ಮಾಡುತ್ತೇವೆ ಅಂತ ಹೇಳಿದ್ದರು. ನಿರುದ್ಯೋಗಿ ಪದವಿಧರರಿಗೆ 3 ಸಾವಿರ ಅಂತ ಹೇಳಿದ್ದರು. ಈಗ ಏನು ಹೇಳ್ತಿದ್ದಾರೆ? ಎದ್ದೇಳು ಕರ್ನಾಟಕ ಅಂತ ಹೇಳ್ತಿದ್ರಲ್ಲ, ಈಗ ಎದ್ದೇಳಿಸಿ ಎಂದರು.
ಹೆಣ್ಣುಮಕ್ಕಳಿಗೆ ಧರ್ಮಸ್ಥಳ, ತಿರುಪತಿ, ಪುಣೆ ಎಲ್ಲ ಫ್ರೀ ಅಂದ್ರಲ್ಲ ಈಗ ಏನ್ ಹೇಳ್ತಿದ್ದಾರೆ. ಇದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಅನ್ನೋದನ್ನ ಕಾದು ನೋಡೋಣ. ಇವರ ಸುಳ್ಳಿನ ಆಟ ಇದ್ಯಲ್ಲ ಅದರ ಮುಂದೆ ನಮ್ಮ ಪಕ್ಷದ ಹೋರಾಟದ ಸ್ವರೂಪ ಇರಲಿದೆ ಎಂದು ಹೆಚ್ ಡಿಕೆ ಹೇಳಿದ್ರು.
ಕುಮಾರಸ್ವಾಮಿ ಪ್ರಮಾಣ ವಚನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಬೆಳಗ್ಗೆ ಹಂಗಾಮಿ ಸ್ಪೀಕರ್ ಶ್ರೀ ಆರ್ ವಿ ದೇಶಪಾಂಡೆ ಅವರಿಂದ ವಿಧಾನಸಭೆಯ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸ್ಪೀಕರ್ ಅವರ ಕಚೇರಿಯಲ್ಲಿ ಪ್ರಮಾಣ ಸ್ವೀಕಾರ ನಡೆಯಿತು.
ಕುಸಿದ ಜೆಡಿಎಸ್ ಶಾಸಕರ ಸಂಖ್ಯೆ.. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ನಿಂದ 19 ಶಾಸಕರು ಆಯ್ಕೆ ಆಗಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಜೆಡಿಎಸ್ ಶಾಸಕರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. 2018 ರಲ್ಲಿ ಜೆಡಿಎಸ್ನಿಂದ 37 ಮಂದಿ ಶಾಸಕರಾಗಿ ಆಯ್ಕೆ ಆಗಿದ್ದರು. ಆಗ 80 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ, ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ನೀಡುವ ಮೂಲಕ ಮೈತ್ರಿ ಸರ್ಕಾರ ರಚಿಸಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಒಂದೇ ವರ್ಷಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ನ ಕೆಲ ಶಾಸಕರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಬಳಿಕ ಅವರೆಲ್ಲ ಬಾರತೀಯ ಜನತಾ ಪಕ್ಷ (ಬಿಜೆಪಿ)ಯೊಂದಿಗೆ ಕೈ ಜೋಡಿಸಿದರು. ಹೀಗಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಈ ಬಾರಿ 2023ರ ಮೇ 10 ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಮೇ 13 ರಂದು ಹೊರಬಿದ್ದ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ 135 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಸರ್ಕಾರ ರಚನೆ ಮಾಡಿದೆ. ಬಿಜೆಪಿ 66 ಸೀಟುಗಳನ್ನು ಗೆಲ್ಲುವ ಮೂಲಕ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದೆ.
ಇದನ್ನೂ ಓದಿ: ನೂತನ ಸ್ಪೀಕರ್ ಯು.ಟಿ.ಖಾದರ್ ಅಭಿನಂದಿಸಿ ಶಾಸಕರಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ