ಬೆಂಗಳೂರು: ಪ್ರತಿ ನಾಗರಿಕನಿಗೂ ರಕ್ಷಣೆ ಕೊಡುವ ಸಂವಿಧಾನವನ್ನು ಅಂಬೇಡ್ಕರ್ ನಮಗೆ ಕೊಟ್ಟಿದ್ದಾರೆ. 70 ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಕೇವಲ ಟೀಕೆಗಾಗಿ ಟೀಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಧಾನಸಭೆಯಲ್ಲಿ ಇಂದು ಸಂವಿಧಾನದ ಮೇಲೆ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ಪ್ರತಿಕ್ರಿಯೆ ನೋಡಿದರೆ ಅಂಬೇಡ್ಕರ್ ಅವರು ನೀಡಿದ ಮಹಾನ್ ಗ್ರಂಥವನ್ನು ಅನುಷ್ಠಾನಕ್ಕೆ ತರುವಲ್ಲಿ ನಾವು ಆಳುವವರು ಸಂವಿಧಾನಕ್ಕೆ ಗೌರವ ಸಲ್ಲಿಸುವಂತೆ ನಡೆದುಕೊಂಡಿದ್ದೇವೆಯೇ ಅಥವಾ ಎಡವಿದ್ದೇವೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.
ಎಲ್ಲಾ ಜನರಿಗೂ ರಕ್ಷಣೆ ನೀಡುವಂತಹ ಸಂವಿಧಾನವನ್ನು ಅಂಬೇಡ್ಕರ್ ಅವರ ತಂಡ ನೀಡಿದೆ. ಆದರೆ, ಇತ್ತೀಚೆಗೆ ನನಗೆ ಕೆಲವೊಂದು ಅನುಮಾನಗಳು ಕಾಡತೊಡಗಿವೆ. ಅಂಬೇಡ್ಕರ್ ಅವರ ಸಂವಿಧಾನವನ್ನು ನಾವು ಕೇವಲ ಶೋ ಪೀಸ್ ಆಗಿ ಇಟ್ಟಿದ್ದೇವಾ ಅಥವಾ ಮೂಲಭೂತ ಹಕ್ಕುಗಳ ವಿಚಾರದಲ್ಲಿ ನಾವು ಎಡವಿದ್ದೇವಾ ಎಂಬ ಪ್ರಶ್ನೆ ಮೂಡಿದೆ ಎಂದರು.
ಅಲ್ಲದೆ ನ್ಯಾಯಾಂಗದಲ್ಲಿ ಆಗದೆ ಇರುವ ಕೆಲಸ ರೌಡಿಗಳ ಹತ್ತಿರ ಹೋದರೆ ಆಗುತ್ತದೆ ಅಂದರೆ ನಾವು ಎಲ್ಲಿಗೆ ಬಂದಿದ್ದೇವೆ? ಇವತ್ತಿನ ಪರಿಸ್ಥಿತಿಗೆ ನನ್ನನ್ನು ಸೇರಿ ನಾವೇ ಕಾರಣ. ಚುನಾವಣೆಯಲ್ಲಿ ಗೆದ್ದು ಬಂದ ನಂತರ ಜನರನ್ನು ಮೆಚ್ಚಿಸಿ ಮುಂದಿನ 5 ವರ್ಷಗಳ ನಂತರ ಮತ್ತೆ ಗೆಲ್ಲೋದು ಹೇಗೆ ಅನ್ನೋದು ನಮ್ಮ ಚಿಂತೆ. ಸಂವಿಧಾನದ ಚಿಂತೆ ಯಾರಿಗೆ ಬೇಕು ಇಲ್ಲಿ. ಇವತ್ತು ಮಹಾತ್ಮ ಗಾಂಧಿ ಅವರು ಬದುಕಿದ್ದರೆ ನಿಮ್ಮ ಫೋಟೋ ನೀವೇ ಇಟ್ಟುಕೊಳ್ಳಿ, ನಮಗೆ ಗರಿ ಗರಿ ನೋಟು ಕೊಡಿ ಅನ್ನುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಯಾರು ಯಾರು ನನ್ನನ್ನು ಭೇಟಿ ಮಾಡಿ ಏನೇನು ಆಫರ್ ಕೊಟ್ಟರು ಅಂತ ಗೊತ್ತಿದೆ. ಅವರನ್ನೆಲ್ಲಾ ನಾನು ಬೈಯ್ದು ಕಳುಹಿಸಿದೆ. ನಿಮ್ಮನ್ನು ಆಯಕಟ್ಟಿನ ಜಾಗಗಳಿಗೆ ಕಳುಹಿಸಿದರೆ ಆ ಸಂಸ್ಥೆ ಉಳಿಯುತ್ತಾ ಎಂದು ಹೇಳಿ ಕಳುಹಿಸಿದೆ. ಆದರೆ ಈಗ ಅದೇ ಅಧಿಕಾರಿಗಳು ಎಲ್ಲೆಲ್ಲಿದ್ದಾರೆ ಗೊತ್ತಿದೆಯೇ? ನಾನು ಯಾರ ಹೆಸರನ್ನೂ ಹೇಳಲ್ಲ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಇಡೀ ಕುಟುಂಬದ ಬಗ್ಗೆ ಆರೋಪ ಮಾಡಿದ್ದರು. ನಮ್ಮ ಕುಟುಂಬದವರು ಸಾವಿರಾರು ಕೋಟಿ ರೂ. ಮಾಡಿಕೊಂಡಿರುವುದನ್ನು ಸಾಬೀತು ಮಾಡಿದರೆ ನಾನು ಇಂದೇ ರಾಜಕೀಯ ಜೀವನದಿಂದ ನಿವೃತ್ತನಾಗುತ್ತೇನೆ. ನಮ್ಮ ಕುಟುಂಬದ ಬಗ್ಗೆ ಆರೋಪಿಸಬೇಕಾದರೆ ಎಚ್ಚರಿಕೆಯಿಂದ ಹೇಳಬೇಕು ಎಂದು ಕಿಡಿಕಾರಿದರು.
ರಾಜಕೀಯಕ್ಕೆ ಬಂದ ಮೇಲೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ. ಜನ ಬಯಸಿದರೆ ಮಾತ್ರ ರಾಜಕೀಯಕ್ಕೆ ಬರಬಹುದು ಮುಂದುವರಿಯಬಹುದು. ಇಂದಿನ ಚುನಾವಣೆ ಎಲ್ಲಿಗೆ ಬಂದಿದೆ ಎಂದು ಎಲ್ಲವನ್ನು ಓಪನ್ ಆಗಿ ಮಾತಾಡೋಕೆ ಆಗಲ್ಲ. 2004ರಲ್ಲಿ ಹೆಚ್.ಡಿ.ದೇವೇಗೌಡರು ರಾಜಾಜಿನಗರದ ಬಡ್ಡಿ ಚೆನ್ನಪ್ಪ ಬಳಿ ಚೆಕ್ ಕೊಟ್ಟು ಐದು ಲಕ್ಷ ರೂ. ಸಾಲ ತಂದು ಚುನಾವಣೆ ಮಾಡಿದ್ದರು. ಯತ್ನಾಳ್ ನೀವು ಸಾವಿರಾರು ಕೋಟಿ ಲೂಟಿ ಮಾಡಿದ್ರಿ ಅಂತ ಆರೋಪ ಮಾಡಿದ್ರಿ. ನಾನು ದೇವೇಗೌಡರ ಸಂಸ್ಕೃತಿ ಹೇಳಿದೆ. ನನ್ನ ಸಂಸ್ಕೃತಿ ಬೇರೆ ಎಂದ ಕುಮಾರಸ್ವಾಮಿ, ನಾನು ಕೊಟ್ಟಿದ್ದೇನೆ, ಕಳೆದುಕೊಂಡಿದ್ದೇನೆ. ಆಸ್ತಿ ಸಂಪಾದನೆ ಮಾಡಿಲ್ಲ. ಜನರ ಪ್ರೀತಿ ಸಂಪಾದನೆ ಮಾಡಿದ್ದೇನೆ ಎಂದು ಕುಟುಕಿದರು.
ಇದೇ ವೇಳೆ 2011ನೇ ಸಾಲಿನ ಕೆಪಿಎಸ್ಸಿ ನೇಮಕಾತಿ ರದ್ದು ವಿಚಾರವನ್ನು ಪ್ರಸ್ತಾಪಿಸಿದ ಅವರು, ಕೆಪಿಎಸ್ಸಿ ಮೂಲಕ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕವಾಗಿದ್ದ 364 ಮಂದಿ ನೇಮಕಾತಿಯನ್ನು ಏಕೆ ರದ್ದು ಮಾಡಲಾಯಿತು. ಆಯ್ಕೆಯಾದವರು ಏನು ಅನ್ಯಾಯ ಮಾಡಿದ್ದರು. ಆಗ ಮಾತ್ರ ನೇಮಕಾತಿಯಲ್ಲಿ ತಪ್ಪುಗಳಾಗಿದ್ದವೆಯೇ? ಈಗ ಪರಿಶುದ್ಧ ನೇಮಕಾತಿ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು.
ಆಗ ಮಧ್ಯೆ ಪ್ರವೇಶಿಸಿದ ಶಾಸಕ ಹೆಚ್.ಡಿ.ರೇವಣ್ಣ, ಅರಸೀಕೆರೆ ಕೆರೆಗೋಡು ಗ್ರಾಮದ ಕೂಲಿ ಮಾಡುವ ಮಹಿಳೆ ಮಗ ಕೆಎಎಸ್‍ಗೆ ಆಯ್ಕೆಯಾಗಿದ್ದರು. ಅಷ್ಟು ಕಡು ಬಡತನದ ಕುಟುಂಬದವರು ಲಂಚ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಚಿವ ಮಾಧುಸ್ವಾಮಿ, ನೇಮಕಾತಿ ರದ್ದತಿಗೆ ಸಂಬಂಧಿಸಿದಂತೆ 2017ರ ಫೆ. 7ರಂದು ವಿಧೇಯಕ ಮಂಡಿಸಿ ಅಂಗೀಕರಿಸಿರುವ ದಾಖಲೆಗಳಿವೆ. ಆ ಸಂದರ್ಭದಲ್ಲಿ ನೀವ್ಯಾರು ಗಮನಿಸಿಲ್ಲವೇ ಎಂದು ಗಮನ ಸೆಳೆದರು.