ಬೆಂಗಳೂರು: ಸಿದ್ದರಾಮಯ್ಯ ಪಕ್ಷ ಬಿಡಲು ನಾನು ಕಾರಣನಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಕರೆದಿರುವ ಸಂಘಟನಾ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಓದಿ: 'ಬಿಎಸ್ವೈ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರವಾಹ, ಬರ, ಕೊರೊನಾ ಎದುರಾದವು'
ಪ್ರಧಾನಿ ಮೋದಿ ರೈತರ ಅಕೌಂಟ್ಗೆ ಎರಡು ಸಾವಿರ ರೂ ಹಾಕಿದ್ದಾರೆ. ಅದನ್ನು ಬಿಜೆಪಿಯವರು ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಾರೆ. ಅದೇ ನಾನು ಸಿಎಂ ಆಗಿದ್ದಾಗ ರೈತರ ಎರಡು ಲಕ್ಷ ಸಾಲ ಮನ್ನಾ ಮಾಡಿದ್ದೇನೆ. ದಯವಿಟ್ಟು ನಮ್ಮ ಕಾರ್ಯಕರ್ತರು ಇದನ್ನು ಜನರಿಗೆ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲಾ ವಿಭಾಗಗಳನ್ನು ವಿಸರ್ಜಿಸಲು ನಿರ್ಧಾರ:
ಜೆಡಿಎಸ್ ರಾಜ್ಯಾಧ್ಯಕ್ಷರು, ಮಹಿಳಾ ಅಧ್ಯಕ್ಷರು ಹಾಗೂ ಯುವ ಘಟಕದ ಅಧ್ಯಕ್ಷರು ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳನ್ನು ವಿಸರ್ಜಿಸಿ ಪಕ್ಷ ಸಂಘಟಿಸುವವರನ್ನು ನೇಮಕ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಈ ಕೆಲಸ ಸಂಕ್ರಾಂತಿ ನಂತರ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಕೋರ್ ಕಮಿಟಿ ರಚನೆ:
ಜನರಲ್ ಸೆಕ್ರೆಟರಿ ಮಾಡಿದರೆ ಪ್ರಯೋಜನವಿಲ್ಲ, ಇಡೀ ಸಿಸ್ಟಂ ಅನ್ನೇ ಬದಲಾಯಿಸುತ್ತೇನೆ. ಶೀಘ್ರದಲ್ಲೇ ಕೋರ್ ಕಮಿಟಿಯನ್ನು ರಚನೆ ಮಾಡುತ್ತೇವೆ. ಕೋರ್ ಕಮಿಟಿ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರಬೇಕು. ಸಭೆಗೆ ಬಾರದೆ ಹೋದರೆ ಬೇರೆಯವರಿಗೆ ಅವಕಾಶ ಕೊಡುತ್ತೇವೆ. ಕಡಿಮೆ ಪದಾಧಿಕಾರಿಗಳ ನೇಮಕ ಮಾಡ್ತೇವೆ. ಒಂದೊಂದು ವಿಭಾಗಕ್ಕೆ ಒಂದು ಟೀಂ ಮಾಡೋಣ ಜಾತಿವಾರು ಪ್ರಾತಿನಿಧ್ಯ ನೀಡುತ್ತೇವೆ ಎಂದರು.
2023ಕ್ಕೆ ನಮ್ಮ ಸರ್ಕಾರ:
ಕನ್ನಡಿಗರ ಸರ್ಕಾರ 2023ಕ್ಕೆ ಅಸ್ತಿತ್ವಕ್ಕೆ ಬರಲಿದೆ. ಹಾಗಾಗಿ, ಪಕ್ಷ ಸಂಘಟನೆ ಮಾಡುವುದರಲ್ಲಿ ಆ ರೀತಿ ಕೆಲಸ ಮಾಡಬೇಕೆಂದು ಕರೆ ನೀಡಿದರು. ಲೀಡರ್ ಸುತ್ತ ಸುತ್ತುವವರಿಗೆ ಅವಕಾಶವಿಲ್ಲ. ಜನರ ಮಧ್ಯೆ ಇರುವವರನ್ನು ಗುರುತಿಸಿ ಅವಕಾಶ ಕೊಡುತ್ತೇವೆ. ಮೂವತ್ತು ಜಿಲ್ಲೆಗೆ ಪದವಿ ಓದಿರುವವರನ್ನು ನೇಮಕ ಮಾಡುತ್ತೇವೆ. ಅವರು ನಿಮ್ಮ ನಿಮ್ಮ ಕ್ಷೇತ್ರದ ಸಂಘಟನೆ ವರದಿ ಕೊಡುತ್ತಾರೆ. ಬೂತ್ ಮಟ್ಟದಲ್ಲಿ 10 ಸದಸ್ಯರನ್ನು ನೇಮಕ ಮಾಡಬೇಕು. ಇಲ್ಲವಾದರೆ ಅಂತರವನ್ನು ತೆಗೆದುಹಾಕುತ್ತೇವೆ ಎಂದರು.
ಐದು ಕಾರ್ಯಕ್ರಮ:
ಮುಂದಿನ ಸಾರ್ವತ್ರಿಕ ಚುನಾವಣೆ ಬಂದಾಗ ನಾನು 5 ಕಾರ್ಯಕ್ರಮ ಘೋಷಿಸುತ್ತೇನೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೊಡುತ್ತೇನೆ. ಈಗಲೇ ಹೇಳಿದರೆ ಹೈಜಾಕ್ ಮಾಡುತ್ತಾರೆ ಎಂದರು. ದೇವರಾಜ ಅರಸು ಕಾಂಗ್ರೆಸ್ ತೊರೆದಿದ್ದರು. ಅಂದೇ ಇಂದಿರಾಗಾಂಧಿ ಅವರು ಪಕ್ಷಕ್ಕೆ ಬನ್ನಿ, ಸಿಎಂ ಮಾಡುತ್ತೇವೆ ಎಂದು ದೇವೇಗೌಡರಿಗೆ ಒತ್ತಡ ಹಾಕಿದ್ದರು. ಆದರೆ ದೇವೇಗೌಡರು ಒಪ್ಪದಿದ್ದಾಗ, ಗುಂಡೂರಾವ್ ಅವರು ಮುಖ್ಯಮಂತ್ರಿಯಾದರು.
ಪಕ್ಷ ಸಂಘಟಿಸಲು ಎಲ್ಲ ನಾಯಕರುಗಳು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಕೆಲಸ ಮಾಡಬೇಕು. ಅಸಮಾಧಾನ ಇದ್ದರೆ ಹೊರಗೆ ಮಾತನಾಡಬೇಡಿ, ಬಾಗಿಲು ತೆರೆದೇ ಇರುತ್ತದೆ. ನಮ್ಮ ಬಳಿ ಬಂದು ಚರ್ಚಿಸಿ ಎಂದು ಪರೋಕ್ಷವಾಗಿ ಗುಬ್ಬಿ ಶ್ರೀನಿವಾಸ್ ಮತ್ತಿತರ ಮುಖಂಡರಿಗೆ ಸಲಹೆ ನೀಡಿದರು. ವೈಯಕ್ತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡುವುದು ಬೇಡ. ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷ ಸಂಘಟನೆಗೆ ಕೆಲಸ ಮಾಡೋಣ. ಆ ನಿಟ್ಟಿನಲ್ಲಿ ಸಲಹೆ ನೀಡಿ. ನಾನು ಇದನ್ನೆಲ್ಲ ಗಂಭೀರವಾಗಿ ತೆಗೆದುಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.
ಸಿಎಂ ವಿರುದ್ಧ ಟೀಕೆ:
ಅನುಭವ ಮಂಟಪ ಕಟ್ಟುತ್ತೇವೆ ಎನ್ನುತ್ತಾರೆ, ಆದರೆ ನಯಾಪೈಸೆ ಸರ್ಕಾರದಲ್ಲಿ ದುಡ್ಡಿಲ್ಲ. ಟೆಂಡರ್ ಕರೆದಿಲ್ಲ, ಹೋಗಿ ಮಂಟಪ ಕಟ್ಟುತ್ತೇವೆ ಎಂದು ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ ಮಾಡಿದ್ದಾರೆ.
ಇನ್ನು ಬಿಜೆಪಿ ಎಂಎಲ್ಎ ಮೀಟಿಂಗ್ ಮಾಡಿದ್ದಾರೆ. 25 ಕೋಟಿ ರೂ. ಹಂತ ಹಂತವಾಗಿ ಅನುದಾನ ಕೊಡುತ್ತೇವೆ ಎಂದಿದ್ದರು. ಈಗ 50 ಲಕ್ಷ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಪಾಪ ಕಾಂಗ್ರೆಸ್ ನವರ ಬಗ್ಗೆ ನಾನು ಮಾತನಾಡಲ್ಲ. ಅವರವರೇ ಕಿತ್ತಾಡಿಕೊಳ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸೆಡ್ಡು ಹೊಡೆದ ನಾಯಕರು:
ಮಾಜಿ ಸಚಿವ ಜಿ.ಟಿ. ದೇವೇಗೌಡ, ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಬಸವರಾಜ ಹೊರಟ್ಟಿ ಅವರು ಕೊನೆಗೂ ಸೆಡ್ಡು ಹೊಡೆದರು. ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದ್ದರೂ ಸಭೆಯಿಂದ ಅವರು ದೂರ ಉಳಿದಿದ್ದರು.