ಬೆಂಗಳೂರು/ ನವದೆಹಲಿ : ಎರಡು ಬಾರಿ ಸ್ಪೀಕರ್ ಆಗಿದ್ದವರು, ಸಾಂವಿಧಾನಿಕ ಹುದ್ದೆಯಲ್ಲಿದ್ದವರು, ಸ್ವಯಂಘೋಷಿತ ಸಂವಿಧಾನ ತಜ್ಞರೂ ಆಗಿರುವ ರಮೇಶ್ ಕುಮಾರ್ ಸದನದಲ್ಲಿ ಮಹಿಳೆಯರಿಗೆ ಘೋರ ಅಪಮಾನ ಮಾಡಿದ್ದಾರೆ. ಮಹಿಳೆಯರ ಜೊತೆಗೆ ಸಭಾಧ್ಯಕ್ಷ ಪೀಠಕ್ಕೂ ಅಪಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ನವದೆಹಲಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಸ್ಪೀಕರ್ ಆಗಿದ್ದ ಮಹಾನುಭಾವರು ಅದೇ ಪೀಠದಲ್ಲಿ ಕುಳಿತಿದ್ದವರ ಕಲಾಪ ನಡೆಸುವ ಕಷ್ಟ, ಒತ್ತಡದ ಬಗ್ಗೆ ಮಾತನಾಡುವಾಗ ಅವರ ಪರಿಸ್ಥಿತಿಯನ್ನು ಅತ್ಯಾಚಾರಕ್ಕೆ ಒಳಗಾಗುವ ಅಸಹಾಯಕ ಮಹಿಳೆಗೆ ಹೋಲಿಸುವ ಮೂಲಕ ಸಂವಿಧಾನದತ್ತವಾದ ಸಭಾಧ್ಯಕ್ಷರ ಪೀಠಕ್ಕೆ ಕ್ಷಮಾರ್ಹವಲ್ಲದ ಅಪಮಾನ ಮಾಡಿದ್ದಾರೆ. ಸದನದಲ್ಲಿ ಮಹಿಳೆಯರಿಗೂ ಅಪಮಾನ ಮಾಡಿದ್ದಾರೆ. ಕೆಟ್ಟ ಶಬ್ದಗಳನ್ನು ಬಳಕೆ ಮಾಡುವ ಮೂಲಕ ಇಡೀ ಸ್ತ್ರೀ ಕುಲವನ್ನೇ ಹೀಯ್ಯಾಳಿಸಿದ್ದಾರೆ. ಬುದ್ಧಿಜೀವಿಯ ಸೋಗಿನಲ್ಲಿ ತಮ್ಮ ವಿಕೃತಿಯನ್ನು ಪದೇಪದೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಖಾರವಾಗಿ ನುಡಿದರು.
ರಮೇಶ್ ವಿರುದ್ಧ ಹೆಚ್ಡಿಕೆ ಗರಂ : ಸದನದ ಕಲಾಪದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವ ವಿಚಾರಗಳು ಚರ್ಚೆಯಾಗಿವೆ. ಕಲಾಪದಲ್ಲಿ ಏನೆಲ್ಲಾ ಚರ್ಚೆ ಆಗಿದೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ನನ್ನ ತಂದೆಯವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ನನ್ನ ಹುಟ್ಟುಹಬ್ಬದ ಹಿನ್ನೆಲೆ ನಾನು ಮೊದಲೇ ಸ್ಪೀಕರ್ ಅವರ ಬಳಿ ಅನುಮತಿ ಪಡೆದು ದೆಹಲಿಗೆ ಬಂದಿದ್ದೇನೆ.
ಕಲಾಪದಲ್ಲಿ ನಡೆಯುತ್ತಿರುವ ಪ್ರತಿಯೊಂದನ್ನು ನಾನು ನೋಡುತ್ತಿದ್ದೇನೆ. ರಾಜ್ಯದ ಅನುಭವಿ ರಾಜಕಾರಣಿ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ರಮೇಶ್ ಕುಮಾರ್ ಮಾತು, ಸ್ಪೀಕರ್ ನಡೆದುಕೊಂಡ ರೀತಿ ಖಂಡನೀಯ. ಮಹಿಳೆಯರ ಬಗ್ಗೆ ಮಾತನಾಡುವಾಗ ಆ ಪದ ಬಳಕೆ ಅಗತ್ಯ ಏನಿತ್ತು?, ಮೊದಲು ಮಾತನಾಡಿ ನಂತರ ಕ್ಷಮೆ ಕೋರಿದರೆ ಮುಗಿಯುವುದಿಲ್ಲ. ಇವರೆಲ್ಲಾ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಕುಲಗೆಡಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದೇ ಸದನದ ದಾಖಲೆಯೇ, ಮಂಗಳವಾರದಿಂದ ನಾನು ಸದನದಲ್ಲಿ ಭಾಗವಹಿಸುತ್ತಿದ್ದೇನೆ. ಒಂದು ವೇಳೆ ಈ ವಿಚಾರ ಬಂದರೆ ನಾನು ಮಾತನಾಡುತ್ತೇನೆ ಎಂದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿದ್ದು ದೇಶದ್ರೋಹ : ಕಿತ್ತೂರು ರಾಣಿ ಚೆನ್ನಮ್ಮನವರ ಜೊತೆಗೂಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಕನ್ನಡನಾಡಿನ ಹೆಮ್ಮೆಯ ಪುತ್ರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ. ಇದು ಕನ್ನಡಿಗರಿಷ್ಟೇ ಮಾಡಿದ ದ್ರೋಹವಲ್ಲ, ಇಡೀ ದೇಶಕ್ಕೆ ಎಸಗಿದ ದ್ರೋಹ. ಪ್ರತಿಮೆಯನ್ನು ಹಾಳು ಮಾಡಿರುವುದು ಹಾಗೂ ಬೆಳಗಾವಿಯಲ್ಲಿ ವಾಹನಗಳನ್ನು ಸುಟ್ಟು ಹೋಟೆಲ್ಗಳಿಗೆ ಕಲ್ಲು ಹೊಡೆದಿರುವ ಘಟನೆ ಅತ್ಯಂತ ಹೇಯ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಬೆಳಗಿನಜಾವ ಬೆಳಗಾವಿಯಲ್ಲಿ ನಡೆದಿರುವ ಘಟನೆ ಖಂಡನೀಯ. ಹಿಂದೆಯೂ ಮೊಘಲ್ ಸಾಮ್ರಾಜ್ಯ ಸ್ಥಾಪನೆಯಾಗುವಾಗ ಪೋರ್ಚುಗೀಸರು ನಮ್ಮ ದೇಶಕ್ಕೆ ಮೊದಲು ಬಂದಾಗ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆದಿದ್ದ ದಾಳಿಗಳು ಈಗ ಮತ್ತೆ ಪುನಾರಾವರ್ತನೆಯಾಗುತ್ತಿವೆ ಎನಿಸುತ್ತಿದೆ ಎಂದೇಳಿದರು.
ದೇಶಕ್ಕೆ ಮಾಡಿರುವ ದ್ರೋಹ : ಈಗ ನಮ್ಮವರೇ ನಮ್ಮ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮಹಾರಾಷ್ಟ್ರದ ಮರಾಠಿಗರ ಅಭಿಮಾನವನ್ನು ದುರುಪಯೋಗ ಮಾಡಿಕೊಂಡು ಇಂತಹ ಕೆಲಸ ಮಾಡಿರುವುದು ಖಂಡನೀಯ. ಇದು ಕೇವಲ ಕನ್ನಡಿಗರಿಗೆ ಮಾತ್ರವಲ್ಲ ದೇಶಕ್ಕೆ ಮಾಡಿರುವ ದ್ರೋಹ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಚಾಟಿ ಬೀಸಿದ ಹೆಚ್ಡಿಕೆ : ವಾಹನಗಳ ಮೇಲೆ ಕಲ್ಲು ತೂರುವುದು, ಬಂದ್ ಮಾಡುವುದು, ಅಂಗಡಿ ಮುಚ್ಚಿಸುವುದು ನೋಡಿದರೆ ಸರ್ಕಾರ ನಿಷ್ಕ್ರಿಯವಾಗಿದೆಯೇ ಅಥವಾ ಇವರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮೂರ್ನಾಲ್ಕೂ ಸಾವಿರ ಪೊಲೀಸರಿದ್ದರೂ ಕೂಡ ಇಂತಹ ಘಟನೆ ನಡೆದಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಎಂಇಎಸ್ನದ್ದು ಹೇಯ ಕೃತ್ಯ : ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಹೋದರರಂತೆ ಇರಬೇಕು. ಇಂತಹ ಘಟನೆಗಳು ಅಕ್ಕಪಕ್ಕದ ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಹಾಳು ಮಾಡುತ್ತವೆ. ಇಂತಹ ಘಟನೆಗಳಿಂದ ಎಂಇಎಸ್ನವರು ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ಬೆಳಗಾವಿ ಕರ್ನಾಟಕದ ಭಾಗವಾಗಿದೆ. ನೀವು ಕನ್ನಡದ ಮಣ್ಣಿನಲ್ಲಿ ಜೀವನ ಕಟ್ಟಿಕೊಂಡಿದ್ದೀರಾ. ನಾಡಿನ ಅನ್ನವನ್ನು ತಿಂದು, ಈ ಮಣ್ಣಿನಲ್ಲಿ ಬದುಕಿ ಇಂತಹ ಹೇಯ ಕೃತ್ಯ ಮಾಡುವುದು ದೇಶ ದ್ರೋಹದ ಕೆಲಸ ಎಂದರು.
ಇದನ್ನೂ ಓದಿ: ಭಗ್ನಗೊಂಡ ಸ್ಥಳದಲ್ಲೇ ಹೊಸ ಮೂರ್ತಿ ಪ್ರತಿಷ್ಠಾಪನೆ.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಕ್ಷೀರಾಭಿಷೇಕ