ಬೆಂಗಳೂರು: ಕೊಡಗಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷದವರು ಅಲ್ಲಿನ ಜನರ ಬದುಕಿನ ಜೊತೆ ಚೆಲ್ಲಾಟ ಆಡಲು ಹೊರಟಿದ್ದಾರೆ. ಹೀಗಾಗಿ ಶಾಂತಿ ಕಾಪಾಡಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೊಡಗು ಜಿಲ್ಲೆಯ ಮುಖಂಡರ ಜೊತೆ ಪಕ್ಷ ಸಂಘಟನೆ ಕುರಿತು ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರಾವಳಿಯ ತರಹವೇ ಅಲ್ಲೂ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಇದಕ್ಕೆ ಪ್ರೋತ್ಸಾಹ ಕೊಡಬೇಡಿ ಅಂತ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ಸೌಹಾರ್ದಯುತ ನಡಿಗೆಗಿಂತ ಜನತೆಗೆ ಜಾಗೃತಿ ಮೂಡಿಸಬೇಕು. ಜನ ಶಾಂತಿಯಿಂದ ಬದುಕುವಂತೆ ಮಾಡಬೇಕು. ಕೊಡಗಿನಲ್ಲಿ 144 ಸೆಕ್ಷನ್ ಮುಗಿದ ನಂತರ ನಾನು ಮತ್ತು ನಮ್ಮ ಪಕ್ಷದ ಅಧ್ಯಕ್ಷರು ಕೊಡಗಿಗೆ ಹೋಗುತ್ತೇವೆ ಎಂದು ಹೇಳಿದರು.
ಪಕ್ಷ ಸಂಘಟನೆ ಬಗ್ಗೆ ಚರ್ಚೆ: ಸದ್ಯದ ಪರಿಸ್ಥಿತಿ ಬಗ್ಗೆ ಕೊಡಗು ಜಿಲ್ಲೆಯ ಮುಖಂಡರ ಸಭೆ ನಡೆಸಿದ್ದೇನೆ. ಮುಂದೆ ಪಕ್ಷ ಸಂಘಟನೆ ಹೇಗೆ ಮಾಡಬೇಕೆಂದು ಚರ್ಚೆ ಮಾಡಿದ್ದೇನೆ. ಸದ್ಯದ ಪರಿಸ್ಥಿತಿ, ಮೂರುವರೆ ವರ್ಷಗಳಿಂದ ಕುಂಠಿತಗೊಂಡಿದ್ದ ಸಂಘಟನೆ ಬಗ್ಗೆ ಪ್ರತಿಯೊಬ್ಬರಿಂದ ಅಭಿಪ್ರಾಯ ಸಂಗ್ರಹ ಮಾಡಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಶಾಂತಿ ಸೌಹಾರ್ದತೆಯ ನೆಲದಲ್ಲಿ ನಡೆದ ಒಂದು ಮೊಟ್ಟೆಯ ಕಥೆ ಹಿಡಿದ ಕಾಂಗ್ರೆಸ್. 2009-10ರಲ್ಲಿ ಮಲ್ಲಯುದ್ದದ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತಲ್ಲ ಅದು ನೆನಪಾಯಿತು. ಬಳ್ಳಾರಿ ಪಾದಯಾತ್ರೆಯಂತೆ ಇಲ್ಲಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ನವರು ಅಧಿಕಾರ ಹಿಡಿಯುವ ಭ್ರಮೆಯಲ್ಲಿದ್ದಾರೆ ಎಂದು ಹೆಚ್ಡಿಕೆ ಟೀಕಿಸಿದರು.
ಇದನ್ನೂ ಓದಿ: ಜನರ ಶಾಂತಿ, ನೆಮ್ಮದಿಗಾಗಿ ಕೊಡಗಿನಲ್ಲಿ 144 ಸೆಕ್ಷನ್ ಜಾರಿ: ಗೃಹ ಸಚಿವ ಆರಗ ಜ್ಞಾನೇಂದ್ರ
ಅಲ್ಲದೇ, ಬಿಜೆಪಿ ವಿರುದ್ಧ ದಂಗೆ ಎಬ್ಬಿಸುವ ಭ್ರಮೆಯಲ್ಲಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಜನಾಂದೋಲನ ಅಂದರು. ಸದ್ಯ 144 ಸೆಕ್ಷನ್ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಅಶಾಂತಿ ಮೂಡಿಸಿ, ವಾತಾವರಣ ಕಲುಷಿತಗೊಳಿಸುವ ಹುನ್ನಾರದ ಬಗ್ಗೆ ನಾವು ಜನಜಾಗೃತಿ ಮೂಡಿಸಲು ಹೇಳಿದ್ದೇವೆ. ಕೊಡಗಿನ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಎರಡೂ ಪಕ್ಷಗಳು ಮಾಡುತ್ತಿವೆ. ಈ ಬಗ್ಗೆ ಜನಜಾಗೃತಿ ಮೂಡಿಸಿ ಸಂಘಟನೆ ಮಾಡಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಪಾದಯಾತ್ರೆಯಿಂದ ಏನು ಸಾಧನೆ ಮಾಡ್ತಾರೆ, ಇದೇನು ಸಾರ್ವಜನಿಕರಿಗೆ ಆಗಿರುವ ತೊಂದರೆನಾ?. ಹಿಂದೆ ಟೊಮೆಟೊ, ಚಪ್ಪಲಿ ತೂರಿರುವ ಉದಾಹರಣೆ ಇಲ್ಲವೇ. ಪಾದಯಾತ್ರೆಯಿಂದ ಯುದ್ಧ ಸಾರಿದ ಉದಾಹರಣೆ ನೋಡಿಲ್ಲ. ಇದೇನು ಪಾಕಿಸ್ತಾನ-ಭಾರತ ಯುದ್ಧವೇ?. ಉಕ್ರೇನ್- ರಷ್ಯಾ ಯುದ್ಧವೇ?. ಮೊಟ್ಟೆ ಎಸೆತ ಅಂತ ಪ್ರತಿಷ್ಠೆಗೆ ತೆಗದುಕೊಂಡು ಸಂಘರ್ಷ ಮಾಡುವ ಬದಲು ಅಭಿವೃದ್ಧಿ ಬಗ್ಗೆ ಮಾತಾಡಿ, ಸರ್ಕಾರದ ವೈಫಲ್ಯಗಳ ಬಗ್ಗೆ ಮಾತಾಡಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ರೆ ಹೆಣ ಬೀಳುತ್ತೆ: ರಾಜ್ಯಸಭಾ ಸದಸ್ಯ ಜಗ್ಗೇಶ್
ಸಾರ್ವಜನಿಕರಿಗೆ ಆದ ಸಮಸ್ಯೆ ಏನು?. ಬೆಳೆ ಹಾನಿ ಪರಿಹಾರ ಇಲ್ಲ. ಒಂದು ಮನೆ ಕಟ್ಟಲಿಲ್ಲ. ಕೊರೊನಾ ಪರಿಹಾರ ಏನಾಗಿದೆ?. ಈ ವಿಚಾರವಾಗಿ ಪಾದಯಾತ್ರೆ ಮಾಡಿ. ಸರ್ಕಾರದ ವೈಫಲ್ಯದ ವಿರುದ್ಧ ಮೈಸೂರಿನಿಂದ ಪಾದಯಾತ್ರೆ ಮಾಡಿ ನಾವು ಕೈ ಜೋಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಜಾತಿ-ಧರ್ಮಗಳ ಹೆಸರಲ್ಲಿ ಬಿಜೆಪಿ-ಕಾಂಗ್ರೆಸ್ ಮತ ಪಡೆಯಲು ಪ್ಲ್ಯಾನ್ ಮಾಡುತ್ತಿದ್ದಾರೆ. ಇದಕ್ಕೆ ಜನರು ಬೆಲೆ ಕೊಡಬಾರದು. ಪಾದಯಾತ್ರೆ ಮಾಡಿ ಯಾಕೆ ಕೊಡಗು ಹಾಳು ಮಾಡ್ತೀರಾ?. ಮನೆಯಲ್ಲಿ ಸುಮ್ಮನೆ ಇದ್ದು ಬಿಡಿ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಸಮಸ್ಯೆ ಮಾಡಬೇಡಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ದೆಹಲಿಯಲ್ಲಿ ಒಂದೆರೆಡು ಕೋಟಿ ರೂ ಪ್ರಕರಣಕ್ಕೆ ಸಿಬಿಐ ದಾಳಿ.. ಬಿಜೆಪಿಯಲ್ಲಿ ನೈತಿಕತೆ ಇದೆಯೇ ಎಂದ ಹೆಚ್ಡಿಕೆ