ಬೆಂಗಳೂರು: ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳು ಬಾಂಬ್ ಬೆದರಿಕೆ ಒಡ್ಡಿರುವುದು ಕಳವಳಕಾರಿ. ಮಕ್ಕಳು, ಪೋಷಕರು ತೀವ್ರವಾಗಿ ಆತಂಕಗೊಂಡಿದ್ದು, ಅವರಲ್ಲಿ ಭೀತಿ ಸೃಷ್ಟಿಸಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ದುರುದ್ದೇಶದಿಂದಲೇ ದುಷ್ಟಶಕ್ತಿಗಳು ಇಂತಹ ಹುನ್ನಾರ ನಡೆಸಿರಬಹುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಯಾವುದೇ ಕಾರಣಕ್ಕೂ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಪೋಷಕರು ತಮ್ಮ ಮಕ್ಕಳನ್ನು ಧೈರ್ಯವಾಗಿ ಶಾಲೆಗಳಿಗೆ ಕಳುಹಿಸುವಂತಹ ಸುರಕ್ಷತೆ, ಭದ್ರತೆಯ ಖಾತರಿಯನ್ನು ನೀಡಬೇಕು. ಈ ಬೆದರಿಕೆಗಳ ಬಗ್ಗೆ ಆಮೂಲಾಗ್ರ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ? ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚಿ ದುಷ್ಟರ ಹೆಡೆಮುರಿ ಕಟ್ಟಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ನೆರವು ಪಡೆಯುವ ಬಗ್ಗೆ ರಾಜ್ಯ ಸರ್ಕಾರ ಮೀನಮೇಷ ಎಣಿಸಬಾರದು ಎಂದರು ಹೇಳಿದ್ದಾರೆ.
ತನಿಖೆಗೆ ವಿಜಯೇಂದ್ರ ಆಗ್ರಹ: ಶಾಲೆಗಳಿಗೆ ಬಂದಿರುವ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಸಮಾಜ ಕಂಟಕ ಶಕ್ತಿಗಳಿಗೆ ಪೊಲೀಸ್ ಭಯ ಇಲ್ಲದಂತಾಗಿದೆ. ಇದರ ಪರಿಣಾಮವಾಗಿಯೇ ಕಿಡಿಗೇಡಿಗಳು ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂದು ಭಯದ ವಾತಾವರಣ ಸೃಷ್ಟಿಸಲು ನಿರ್ಭಯವಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ ಈ ಪ್ರಕರಣವನ್ನು ಹುಸಿ ಎಂದು ಹಗುರವಾಗಿಯೂ ಪರಿಗಣಿಸುವಂತಿಲ್ಲ, ಸಮಾಜ ಪೀಡಕ ಶಕ್ತಿಗಳು ಶಾಲೆಗಳನ್ನೇ ಗುರಿಯಾಗಿಸಿಕೊಂಡು ಬೆದರಿಕೆ ಒಡ್ಡಿದ್ದಾರೆಂದರೆ, ಈ ಬಗ್ಗೆ ಗಂಭೀರ ತನಿಖೆ ಹಾಗೂ ಮುಂಜಾಗ್ರತೆ ವಹಿಸಬೇಕಾಗಿರುವುದು ಸರ್ಕಾರದ ಆದ್ಯತೆಯಾಗಬೇಕಿದೆ ಎಂದಿದ್ದಾರೆ.
ರಾಜ್ಯದ ಪ್ರತಿಯೊಂದು ಶಾಲೆಗಳಿಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಆತಂಕ ರಹಿತ ವಾತಾವರಣ ಮೂಡಿಸಲು ಈ ಕೂಡಲೇ ಅಗತ್ಯ ಕ್ರಮ ಕೈಗೊಂಡು ಈ ಪ್ರಕರಣದ ಸಮಗ್ರ ತನಿಖೆಗೆ ವಹಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
ಕೆ.ಎಸ್.ಈಶ್ಬರಪ್ಪ ಹೇಳಿಕೆ: ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಇಟ್ಟಿರುವ ವಿಚಾರ ಕೇಳಿ ನಮಗೆ ದಿಗ್ಭ್ರಮೆ ಉಂಟಾಯಿತು. ಶಾಲೆಗಳಿಗೆ ಬಾಂಬ್ ಇಟ್ಟಿರುವ ಸುದ್ದಿ ಸುಳ್ಳಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಶಾಲೆಗಳಿಗೆ ಬಾಂಬ್ ಇಟ್ಟಿದ್ದಾರೆ ಎಂಬ ಸುದ್ದಿ ನೋಡಿದೆ. ಅದು ಏನಾದರೂ ನಿಜ ಆಗಿದ್ದರೆ ಬಾಂಬ್ ಇಟ್ಟ ರಾಷ್ಟ್ರದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ಮಾತ್ರ ಚಿಂತನೆಯಲ್ಲಿ ಇದ್ದಾರೆ. ಅವರಿಗೆ ಭಯೋತ್ಪಾದನೆ, ಮಕ್ಕಳ ಭವಿಷ್ಯ ಗೊತ್ತಿಲ್ಲ ಎಂದು ಕಿಡಿಕಾರಿದರು.
ಶೆಟ್ಟರ್ ವಾಪಸ್ ಬಿಜೆಪಿಗೆ ಬರುವ ವಿಶ್ವಾಸವಿದೆ: ಜಗದೀಶ್ ಶೆಟ್ಟರ್ ಅವರದು ಸುಸಂಸ್ಕೃತ ಕುಟುಂಬ. ಹಿಂದುತ್ವ ಸಮಾಜವನ್ನು ರಕ್ತಗತ ಮಾಡಿಕೊಂಡ ಕುಟುಂಬ. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ಮೇಯರ್, ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಮೈಯಲ್ಲಿ ಹಿಂದುತ್ವದ ರಕ್ತ ಹರಿಯುತ್ತಿದೆ. ಕಾಂಗ್ರೆಸ್ ಸಂಸ್ಕೃತಿ, ಜಮೀರ್ ಅವರ ಧೋರಣೆ ಅವರಿಗೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಶೆಟ್ಟರ್ ಅವರು ಬಿಜೆಪಿ ಗೆ ವಾಪಸ್ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಸಿಬಿಐ ಕೇಸು ವಾಪಸ್ ವಿಚಾರ: ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಚಾರ್ಜ್ ಶೀಟ್ ಹಾಕುವ ಸಂದರ್ಭದಲ್ಲಿ, ಜೈಲಿಗೆ ಹೋಗುವ ಭೀತಿಯಿಂದ ವಾಪಸ್ ಪಡೆದಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಒತ್ತಡ ಹಾಕಿ ಸಿದ್ದರಾಮಯ್ಯ ಮೂಲಕ ಪ್ರಕರಣ ಹಿಂಪಡೆದಿದ್ದಾರೆ. ಡಿ.ಕೆ.ಶಿವಕುಮಾರ್ ಲೋಕಸಭೆ ಚುನಾವಣೆಗೆ ಮೊದಲು ಜೈಲಿಗೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಯಾವುದೇ ಕಾರಣಕ್ಕೂ ಈ ಸರ್ಕಾರ ಇರಲ್ಲ. ಈ ಸರ್ಕಾರ ಬಿದ್ದು ಹೋಗೋದು ಮಾತ್ರ ಗ್ಯಾರಂಟಿ. ಈ ಸರ್ಕಾರ ಆದಷ್ಟು ಬೇಗ ಹೋಗಲಿ ಅಂತಾ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ ಎಂದರು.
ಇದನ್ನೂ ಓದಿ: ಶಾಲೆಗಳಿಗೆ ಬೆದರಿಕೆ ಇ-ಮೇಲ್ ಕಳುಹಿಸಿದವರನ್ನು ಪತ್ತೆ ಹಚ್ಚಲು ಹೇಳಿದ್ದೇನೆ, ಆತಂಕ ಬೇಡ: ಸಿಎಂ