ಬೆಂಗಳೂರು: 'ದೇವೇಗೌಡ ನೇಗಿಲು ಹಿಡಿದಿದ್ದನಾ?, ಸಗಣಿ ಎತ್ತಿದ್ದನಾ ಎಂದು ಮಾತನಾಡಿದ್ದೀಯಾ?. ನಿನಗೇನಪ್ಪ ಗೊತ್ತು ದೇವೇಗೌಡರ ಬಗ್ಗೆ. ಅವರು ಹೇಮಾವತಿ ನದಿ ಈಜಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ನಾವು ಸಹ ಸಗಣಿ ಬಾಚಿದ್ದೇವೆ. ಮಾತಾಡುವಾಗ ಸರಿಯಾಗಿ ಮಾತನಾಡೋದನ್ನು ಕಲಿತುಕೊಳ್ಳಿ' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ವಾಕ್ಸಮರ ನಡೆಸಿದರು.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಿನಗೆ ಏನು ಗೊತ್ತು ದೇವೇಗೌಡರ ಇತಿಹಾಸ?, ನನ್ನ ಹಾಗೂ ನನ್ನ ತಂದೆ ವಿರುದ್ಧ ಏಕವಚನ ಬಳಸಿ ಮಾತಾಡಿದ್ದಾರೆ. ಈ ಕುಮಾರಸ್ವಾಮಿಗೆ ನಾಚಿಕೆ ಆಗಲ್ವಾ ಅಂತಾರೆ. ನನಗೆ ಏಕೆ ನಾಚಿಕೆ ಆಗಬೇಕು?, ನಿಮ್ಮ ತರ ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಮಾಡುವುದಿಲ್ಲ. ನೀನು ಯಾಕಪ್ಪ ಆದಾಯ ಮಿತಿ 2 ಲಕ್ಷ ರೂ.ನಿಂದ 25 ಲಕ್ಷಕ್ಕೆ ಏರಿಕೆ ಮಾಡಿದೆ' ಎಂದು ತಿರುಗೇಟು ನೀಡಿದರು.
ಹೆಚ್ಡಿಕೆ ಸವಾಲು: ಕುಮಾರಸ್ವಾಮಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಕೃಷಿ ಕಾಯಿದೆಗೆ ಬೆಂಬಲ ಕೊಟ್ಟಿರೋದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ಡಿಕೆ, 'ಸಿದ್ದರಾಮಯ್ಯನವರೇ ನಾನು ಯಾವುದಾದರೂ ಬೇನಾಮಿ ಆಸ್ತಿ ಮಾಡಿರುವುದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ' ಎಂದು ಸವಾಲು ಹಾಕಿದರು.
'ನೀವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಬೇನಾಮಿಯಾಗಿ ಶುಗರ್ ಫ್ಯಾಕ್ಟರಿ ಕ್ಲಬ್ ನಡೆಸುತ್ತಿದ್ದವರು ಯಾರು?. ನಿಮ್ಮ ಹಾಗೆ ನಾನು ಮಾಡಿಲ್ಲ ಸಿದ್ದರಾಮಯ್ಯನವರೇ. ಇನ್ನು ಅಪ್ಪ, ಮಕ್ಕಳು ಕಣ್ಣೀರು ಹಾಕುವುದೇ ಅವರ ಸಂಸ್ಕೃತಿ ಅಂತಾರೆ. ನೀನು ಡಿಸಿಎಂ ಆದ ನಂತರ ಸೋತು ಬಂದು ದೇವೇಗೌಡರ ಮುಂದೆ ನನ್ನ ರಾಜಕೀಯ ಜೀವನ ಮುಗಿಯಿತು ಎಂದು ಕಣ್ಣೀರು ಹಾಕಿದ್ದು ಯಾರು?. ನಾವು ಜನರ ಕಷ್ಟ ನೋಡಿ ಕಣ್ಣೀರು ಹಾಕುತ್ತೇವೆ. ಸಿದ್ದರಾಮಯ್ಯನವರೇ ನನ್ನ ಬಗ್ಗೆ ಪದೇ ಪದೆ ಮಾತಾಡಿ ಮುಖಭಂಗ ಅನುಭವಿಸಬೇಡಿ' ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪವಾದ ತಿದ್ದುಪಡಿ ಕಾಯಿದೆ ಅಂಗೀಕಾರದ ವಿರುದ್ಧ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆಗಳು ನಡೆಯಿತ್ತಲೇ ಇವೆ. ಭೂ ಸುಧಾರಣೆ ಕಾಯಿದೆ ವಿಚಾರದಲ್ಲಿ ನಮ್ಮ ಪಕ್ಷದ ನಿಲುವಿನ ಬಗ್ಗೆ ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 1963ರಲ್ಲಿ ಇದ್ದಂತಹ ಕಾಯಿದೆಯನ್ನೇ ಮುಂದುವರೆಸಿದ್ದಾರೆ. ಅದಕ್ಕೆ ಮಾರ್ಪಾಡು ಮಾಡಿ ಮೊನ್ನೆ ಸದನದಲ್ಲಿ ಕಾಯಿದೆ ಮಂಡಿಸಿದ್ದರು. ನಾನು ಸರ್ಕಾರಕ್ಕೆ ಸಲಹೆ ನೀಡಿದ್ದೆ. 264 ಎಕರೆ ಬದಲಾಗಿ ಭೂಮಿಯ ಮಿತಿ ಮಾಡಲು ಹೇಳಿದ್ದೆ. ಕೃಷಿ ಉದ್ದೇಶಕ್ಕಾಗಿ ಬಳಸಲು ಮಾತ್ರ ಮಾಡಿ ಎಂದಿದ್ದೆ. 79(ಎ)(ಬಿ) ಮಾತ್ರ ಬದಲಾವಣೆ ಆಗಿದೆ. ಹಾಗಾಗಿ, ನಾನು ಬೆಂಬಲಕೊಟ್ಟೆ. ಈ ಮೊದಲು ನಾನು ಕೂಡ ವಿರೋಧಿಸಿದ್ದೆ, ದೇವೇಗೌಡರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆಮೇಲೆ ಎಲ್ಲಾ ತಿಳಿದುಕೊಂಡ ನಂತರ ಬೆಂಬಲ ಕೊಟ್ಟಿರುವುದು ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ನಿಲುವು, ಯಾವತ್ತೂ ಮಾರಕವಾಗುವುದಕ್ಕೆ ಬೆಂಬಲ ಕೊಡುವುದಿಲ್ಲ. ಎಲ್ಲವನ್ನೂ ಲೆಕ್ಕಾಚಾರ ಮಾಡಿಯೇ ತೀರ್ಮಾನಕ್ಕೆ ಬಂದಿರುವುದು. ಜೆಡಿಎಸ್ ಪಕ್ಷ ರೈತರ ಪರವಾಗಿಯೇ ಇರುತ್ತದೆ ಎಂಬುದನ್ನು ಒತ್ತಿ ಹೇಳಿದ ಹೆಚ್ಡಿಕೆ, ರೈತರಿಗೆ ತೊಂದರೆಯಾಗಲು ನಮ್ಮ ಪಕ್ಷ ಯಾವತ್ತೂ ಬಿಡುವುದಿಲ್ಲ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಭೂ ಸುಧಾರಣಾ ಕಾಯಿದೆ ಜಾರಿಯಾಗಿದೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ಆಗಲಿಲ್ಲ. ಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂಬ ಕಾರಣಕ್ಕೆ ಮಂಡನೆ ಆಗಲಿಲ್ಲ. 2010 ರಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ತಂದಿದ್ದರು. ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಜಾರಿ ಮಾಡಬೇಡಿ ಎಂದು ಮನವಿ ಮಾಡಿದ್ದೇವು. ದೇವೇಗೌಡರು ನಾನು ಇದರ ವಿರುದ್ಧ ಇದ್ದೇವೆ. ಬಿಜೆಪಿ ಗೋಮಾತೆ ಹೆಸರಲ್ಲಿ ಮತ ಪಡೆಯಬೇಡಿ. ಮುದಿ ಹಸುಗಳನ್ನು ನಮ್ಮ ಮನೆಗೆ ಕಳಿಸಿ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಅಶೋಕ್ ಹೇಗೆ ನೋಡಿಕೊಳ್ಖುತ್ತಾರೆ ಎಂಬುದನ್ನು ನೋಡಿದ್ದೇವೆ. ಸಿದ್ದರಾಮಯ್ಯ ಕಾಲದಲ್ಲಿ ರಿಯಲ್ ಎಸ್ಟೇಟ್ ಹೇಗೆ ಬೆಳೆಯಿತು ಗೊತ್ತಿದೆ ಎಂದು ಬಿಜೆಪಿಯವರಿಗೂ ಟಾಂಗ್ ನೀಡಿದರು.
ಸಾರಿಗೆ ಇಲಾಖೆ ಬಗ್ಗೆ: ಸಾರಿಗೆ ನೌಕರರಿಗೆ ಮನವಿ ಮಾಡುತ್ತೇನೆ. ಅದೇ ರೀತಿ ಸರ್ಕಾರಕ್ಕೂ ಸಲಹೆ ನೀಡುತ್ತೇನೆ. ಪ್ರತಿಭಟನೆ ನಡೆದಾಗ, ಪ್ರತಿಭಟನೆ ಮಾಡುತ್ತಿರುವವರನ್ನು ವಿಧಾನಸೌಧಕ್ಕೆ ಆಹ್ವಾನ ನೀಡಿ ಅವರ ಸಮಸ್ಯೆ ಆಲಸಿ, ಅಹವಾಲುಗಳನ್ನು ಆಲಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಸರ್ಕಾರ ಅವರ ಜವಾಬ್ದಾರಿ ನಿರ್ವಹಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆಯುವಂತೆ ಮನವಿ ಮಾಡುತ್ತೇನೆ ಎಂದರು.
ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿದೆ. ಎಂಟು ತಿಂಗಳಿನಿಂದ ಸರ್ಕಾರ ಕೋವಿಡ್ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಬೇಡಿಕೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ. ಹಾಗಾಗಿ ಸರ್ಕಾರದ ಜೊತೆ ಚರ್ಚೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳುವುದು ಸೂಕ್ತ ಎಂದು ಹೆಚ್ಡಿಕೆ ಸಲಹೆ ನೀಡಿದರು.