ಬೆಂಗಳೂರು : ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಬರಬೇಕು. ಹಾಗಾಗಿ, ನಿಮ್ಮ ಜೊತೆ ನಾನಿದ್ದೇನೆ. ನೀವು ಕೆಲವು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಹೋರಾಟಗಾರರಿಗೆ ನೇರವಾಗಿ ಆಹ್ವಾನ ನೀಡಿದ್ದಾರೆ.
ಕನ್ನಡಪರ ಸಂಘಟನೆಗಳ ಒಕ್ಕೂಟ ನಗರದ ಪುರಭವನದಲ್ಲಿ ನಿನ್ನೆ(ಬುಧವಾರ) ಆಯೋಜಿಸಿದ್ದ ಕನ್ನಡ ಮನಸ್ಸುಗಳ ಮುಕ್ತ ಮಾತುಕತೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಎಲ್ಲಿಗೆ ಬೇಕಾದರೂ ನನ್ನನ್ನು ಕರೆಯಿರಿ. ನೀವು ಹೇಳಿದ ಕಡೆ ಬರುತ್ತೇನೆ. ನಮಗೆ ರೈತ ಸಂಘಗಳ ಜೊತೆ ಕೆಲವೊಂದು ಭಿನ್ನಾಭಿಪ್ರಾಯ ಇರಬಹುದು. ರೈತರ ಪರವಾಗಿ ಕೆಲಸ ಮಾಡುವವರಿಗೆ ಮುಕ್ತವಾದ ಅವಕಾಶ ಕೊಡುತ್ತೇನೆ ಎಂದರು.
ನನ್ನ ಪಕ್ಷದ ಪ್ರಚಾರಕ್ಕೆ ನಾನು ಬಂದಿಲ್ಲ. ಕನ್ನಡಕ್ಕೆ ಅವಮಾನವಾದಾಗ ಮಾತ್ರ ನೀವು (ಕನ್ನಡಪರ ಹೋರಾಟಗಾರರು) ಬೀದಿಗಿಳಿಯುವುದಿಲ್ಲ. ಪ್ರತಿನಿತ್ಯ ಜನರೊಂದಿಗೆ ಬೆರೆಯಿರಿ. ಆ ಮೂಲಕ ರಾಜಕೀಯಕ್ಕೆ ಬನ್ನಿ. ನೂರಕ್ಕೆ ಶೇ.70ರಷ್ಟು ಹಣ ಕಮಿಷನ್ ರೂಪದಲ್ಲಿ ಹೋಗುತ್ತಿದೆ. ನೀವು ಮಾತ್ರ ಕನ್ನಡ ಕನ್ನಡ ಅಂತಾ ಕೂತಿದ್ದೀರಿ. ರಾಜಕೀಯ ಯಾರಪ್ಪನ ಸ್ವತ್ತಲ್ಲ, ಭ್ರಷ್ಟಾಚಾರ ತಡೆಯಲು ರಾಜಕೀಯಕ್ಕೆ ಬನ್ನಿ ಎಂದು ಬಹಿರಂಗವಾಗಿ ಕರೆ ನೀಡಿದರು.
ಇದನ್ನೂ ಓದಿ: ಹಿಜಾಬ್ ಪ್ರಕರಣ: ಸಿಜೆ ನೇತೃತ್ವದಲ್ಲಿ ವಿಶೇಷ ಪೀಠ ರಚನೆ, ಇಂದು ಮಧ್ಯಾಹ್ನವೇ ವಿಚಾರಣೆ
ನಿಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಲು ನಾನು ಆಹ್ವಾನ ಕೊಟ್ಟಿಲ್ಲ. ಮುಂದಿನ ಚುನಾವಣೆಗೆ ನಿಮ್ಮನ್ನು ಬಳಸಿಕೊಳ್ಳುವ ಸಲುವಾಗಿ ಸಂವಾದ ಆಯೋಜಿಸಿಲ್ಲ. ನಿಮ್ಮ ಅನುಮಾನ, ಸಂಶಯ ಏನೇ ಇರಲಿ. ಎಲ್ಲವನ್ನೂ ಮುಕ್ತವಾಗಿ ಚರ್ಚಿಸಲು ಮುಕ್ತವಾಗಿದ್ದೇನೆ ಎಂದು ಹೇಳಿದರು.
ನಾನು ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕವಾಗಿ. ಚಿತ್ರ ವಿತರಕನಾಗಿ ಜೀವನ ಆರಂಭಿಸಿದವನು ಯಾವುದೋ ಒತ್ತಡಕ್ಕೆ ಒಳಗಾಗಿ ರಾಜಕೀಯಕ್ಕೆ ಬರಬೇಕಾಯಿತು. ಬಿಡದಿಯ ತೋಟದ ಜಾಗ ಹೊರತಾಗಿ ಬೇರೆ ಯಾವುದೇ ಆಸ್ತಿ ಸಂಪಾದಿಸಿಲ್ಲ. ಯಾವುದೇ ವಿದ್ಯಾಸಂಸ್ಥೆ, ಕೈಗಾರಿಕೆಗಳನ್ನು ಮಾಡಲು ಸಿಎಂ ಸ್ಥಾನ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ತಿಳಿಸಿದರು.
ಡಾ. ರಾಜ್ ಕುಮಾರ್ ಸಿನಿಮಾಗಳನ್ನು ನೋಡಿ ಬೆಳೆದವನು. ಅವರಿಂದಲೇ ಬಡವರಿಗೆ ಸಹಾಯ ಮಾಡುವುದನ್ನು ಕಲಿತಿದ್ದೇನೆ. ಚಿಕ್ಕ ವಯಸ್ಸಿನಿಂದ ಮಾನವೀಯತೆ ಬೆಳೆಸಿಕೊಂಡು ಬಂದಿದ್ದೇನೆ. ನಾನು ಮೂಲತಃ ರಾಜಕಾರಣಿ ಅಲ್ಲ. ಬೇರೆ ರಾಜಕಾರಣಿಯಂತೆ ನಾನು ಅಲ್ಲ. ಕೆಂಪುಕೋಟೆಯಲ್ಲಿ ಭಾವುಟ ಹಾರಿಸುವ ಅವಕಾಶವನ್ನು ಜನರು ನಮ್ಮ ಕುಟುಂಬಕ್ಕೆ ಕೊಟ್ಟಿದ್ದಾರೆ. ಆಕಸ್ಮಿಕವಾಗಿ 2006 ರಲ್ಲಿ ಮುಖ್ಯಮಂತ್ರಿ ಆಗಿದ್ದೆ. ಆಗ ನನಗೆ ಆಡಳಿತದ ಅನುಭವ ಇರಲಿಲ್ಲ. ನಮ್ಮ ತಂದೆ ನಮ್ಮಿಂದ ದೂರ ಇದ್ದರು. ನಮ್ಮ ತಂದೆಯವರ ಆರೋಗ್ಯ ಹದಗೆಟ್ಟಿತ್ತು. ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ತಂದೆಯವರು ತುಂಬಾ ಕುಗ್ಗಿ ಹೋಗಿದ್ದರು ಎಂದು ಹಿಂದಿನ ಘಟನಾವಳಿಯನ್ನು ಮೆಲುಕು ಹಾಕಿದರು.
ಇದನ್ನೂ ಓದಿ:ಯೋಗ ಕ್ಲಾಸ್ನಲ್ಲಿ ಲವ್ವಿ-ಡವ್ವಿ: ಸುಪಾರಿ ಕೊಟ್ಟು ಪತಿಯನ್ನೇ ಮುಗಿಸಿದ ಹಂತಕಿ ಪತ್ನಿ!
ರಾಜ್ಯದಲ್ಲಿ ಈಗ 35 ಲಕ್ಷ ಜನ ನಿರುದ್ಯೋಗಿಗಳಿದ್ದಾರೆ. ಜೊತೆಗೆ ಈಗ ಔಟ್ ಸೋರ್ಸಿಂಗ್ ಅಂತಾ ತೆಗೆದುಕೊಳ್ತಾರೆ. ನಾಲ್ಕಾರು ತಿಂಗಳಲ್ಲಿ ಅವು ಮುಚ್ಚುತ್ತಿವೆ. ಹಾಗಾಗಿ, ಈಗ ಸರೋಜಿನಿ ಮಹಿಷಿ ವರದಿ ಜಾರಿಯಾದರೆ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಅದಕ್ಕಿಂತ ದೊಡ್ಡ ಹೋರಾಟದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡಪರ ಸಂಘಟನೆಗಳ ನಾಯಕರು ಮುಖ್ಯವಾಹಿನಿಗೆ ಬರಬೇಕು. ವಿಧಾನಸಭೆ ಚುನಾವಣೆಗೆ ಇನ್ನೂ 14 ತಿಂಗಳ ಕಾಲಾವಕಾಶವಿದೆ. ನಾವೇಕೆ ವಿರೋಧ ಪಕ್ಷದಲ್ಲಿ ಕೂರಬೇಕು? ನಿಮ್ಮೆಲ್ಲರ ಬೆಂಬಲ ಇದ್ದಲ್ಲಿ 125 ಸೀಟ್ ಗೆಲ್ಲುವುದು ಅಸಾಧ್ಯವಲ್ಲ. ಹೀಗಾಗಿ, ನಿಮ್ಮ ಬೆಂಬಲ ಕೇಳಲು ಬಂದಿದ್ದೇನೆ. ಮುಕ್ತವಾದ ಸರ್ಕಾರವನ್ನು ತನ್ನಿ ಎಂದು ಮನವಿ ಮಾಡಿದರು.
ನಮಗೆ 40 ಸ್ಥಾನಗಳನ್ನು ಗೆಲ್ಲುವುದು ಕಷ್ಟವಲ್ಲ. ಏನೇ ಅಪಪ್ರಚಾರ ನಡೆಸಲಿ, ನಮ್ಮ ಪಕ್ಷದ ಎಷ್ಟೇ ಶಾಸಕರನ್ನ ಕರೆದುಕೊಂಡು ಹೋಗಲಿ. ಏನೇ ಮಾಡಿದರೂ ನಲವತ್ತು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಆದರೆ, ನನ್ನ ಗುರಿ 123 ಸ್ಥಾನ ಗೆಲ್ಲುವುದು. ಅದಕ್ಕಾಗಿ ನನ್ನ ಜೊತೆ ಕೈಜೋಡಿಸಿ ಎಂದು ಕನ್ನಡಪರ ಸಂಘಟನೆಗಳ ಮುಖಂಡರಿಗೆ ಆಹ್ವಾನ ನೀಡಿದರು.
ಇದನ್ನೂ ಓದಿ:ಯುಪಿ ವಿಧಾನಸಭೆ: ಇಂದು ಮೊದಲ ಹಂತದ ವೋಟಿಂಗ್; ಯೋಗಿ ಸಂಪುಟದ 9 ಸಚಿವರ ಭವಿಷ್ಯ ನಿರ್ಧಾರ
'ನಿಮ್ಮಲ್ಲೂ ನಾಲ್ಕೈದು ಮಂದಿ ವಿಧಾನಸಭೆಗೆ ಬರಲು ಸಜ್ಜಾಗಿ': ಎಷ್ಟು ದಿನ ನೀವು ಬೀದಿಯಲ್ಲಿ ಹೋರಾಡುತ್ತೀರಾ?, ವಿಧಾನಸಭೆಗೆ ಬಂದು ಗಟ್ಟಿ ಧ್ವನಿಯಾಗಿ. ಕೆಲವು ಕ್ಷೇತ್ರಗಳನ್ನು ನೀವೇ ಆರಿಸಿಕೊಳ್ಳಿ. ಅಲ್ಲಿ ನಮ್ಮ ಕಾರ್ಯಕರ್ತರಿಗೆ ನಿಮ್ಮ ಪರವಾಗಿ ಕೆಲಸ ಮಾಡಲು ಹೇಳುತ್ತೇನೆ. ನನಗೆ ನನ್ನ ಪಕ್ಷಕ್ಕಿಂತಲೂ ಕನ್ನಡಪರ ಸಂಘಟನೆಗಳ ಬೆಂಬಲ, ರಾಜ್ಯದ ಹಿತ ಮುಖ್ಯ. ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು. ಪಕ್ಷದ ಸ್ಥಳೀಯ ಮಟ್ಟದ ನಾಯಕರಿಗೂ ಈ ಮೂಲಕ ಸಂದೇಶ ರವಾನಿಸಲಾಗುತ್ತಿದೆ. ಸಂಘಟನೆಗಳ ಜೊತೆ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯಮಟ್ಟದ ಸಂಘಟನೆಗಳ ನಾಯಕರು ಒಂದೆಡೆ ಸೇರಿ ಕೋರ್‌ಕಮಿಟಿ ರಚಿಸಿಕೊಳ್ಳಲಿ. ಬಳಿಕ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ನಿರ್ಧರಿಸಲು ಅನುಕೂಲವಾಗಲಿದೆ. ನನಗೆ ರಾಜಕೀಯ ಜನ್ಮ ಕೊಟ್ಟಿರೋದು ರಾಮನಗರದ ಜನರು. ನಿಖಿಲ್ ನನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡಬೇಕು ಅಂದುಕೊಂಡಿರಲಿಲ್ಲ. ನಮ್ಮ ರಾಷ್ಟ್ರೀಯ ನಾಯಕರು ಅದನ್ನು ತೀರ್ಮಾನ ಮಾಡಿದರು. ಆದರೆ, ನನ್ನನ್ನು ಧಿಕ್ಕರಿಸಿ ಮಂಡ್ಯ ಜಿಲ್ಲೆಯ ಶಾಸಕರು ನಿಖಿಲ್ ಅವರನ್ನು ಕಣಕ್ಕಿಳಿಸಿದರು. ನಂತರ ಏನೇನಾಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಮಗನನ್ನು ರಾಜಕೀಯಕ್ಕೆ ತರಬೇಕೆಂಬ ಒತ್ತಡ ಇದೆ. ನನಗೆ ಈಗಲೂ ಗೊಂದಲ ಇದೆ. ನಾನು ಬಿಜೆಪಿ ಪರವೂ ಇಲ್ಲ, ಯಾರ ಪರವೂ ಇಲ್ಲ. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ವೀರಶೈವ ವಿರುದ್ಧ ಇದ್ದೇನೆ ಅಂತಾರೆ, ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ನಮ್ಮ ಪಕ್ಷದವರೇ ಮಾತನಾಡಬೇಡಿ ಅಂತಾರೆ. ಕುರುಬ ಸಮುದಾಯದ ಮತಗಳು ಬರುವುದಿಲ್ಲ ಅಂತಾರೆ. ಹಾಗಾಗಿ, ಏನನ್ನೂ ಮಾತನಾಡುತ್ತಿಲ್ಲ. ನಾನು ಮತ್ತು ರೇವಣ್ಣ ಬೇರೆ ಏನಿಲ್ಲ. ನಮ್ಮಿಬ್ಬರ ಧ್ವನಿ ಒಂದೇ. ನಮ್ಮಿಬ್ಬರಲ್ಲಿ ಯಾವುದೇ ಗೊಂದಲ ಇಲ್ಲ. ಅವರಿಗೆ ಸಿದ್ದರಾಮಯ್ಯ ಜೊತೆ ಮೊದಲಿನಿಂದಲೂ ಬಾಂಧವ್ಯ ಇದೆ. ಸಿದ್ದರಾಮಯ್ಯ ಪಕ್ಷ ಬಿಟ್ಟ ಮೇಲೆ ಚಾಮುಂಡೇಶ್ವರಿ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸಬೇಕಾಯಿತು. ಅದರ ಹೊರತಾಗಿ ವೈಯಕ್ತಿಕವಾಗಿ ಸಿದ್ದರಾಮಯ್ಯ ವಿರುದ್ಧ ಯಾವುದೇ ದ್ವೇಷ ಇಲ್ಲ ಎಂದು ಹೆಚ್ಡಿಕೆ ಹೇಳಿದರು.
ಇದನ್ನೂ ಓದಿ:'ಅಲ್ಲಾಹು ಅಕ್ಬರ್' ಎಂದು ಕೂಗಿದ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ
ನಾವು 224 ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಿಲ್ಲ. ಮುಂದಿನ ಚುನಾವಣೆಗೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕನಿಷ್ಠ 30-35 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗುವುದು. ಮೊದಲು ಬೂತ್ ಮಟ್ಟದಲ್ಲಿ ಮಹಿಳೆಯರನ್ನು ಸಂಘಟಿಸಬೇಕು. ಯಾರ ಹಂಗೂ ಇಲ್ಲದೆ ಸ್ವಂತ ಬಲದ ಸರ್ಕಾರ ತರಲು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಗೌಡ, ಕನ್ನಡಪರ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ಲಿಂಗೇಗೌಡ, ಗುರು ಮತ್ತಿತರ ಮುಖಂಡರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್, ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.