ಬೆಂಗಳೂರು: ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿ ಶಾಸಕ ಕಂಪ್ಲಿ ಗಣೇಶ್ ಹಾಗೂ ಆನಂದ್ ಸಿಂಗ್ ಬಡಿದಾಡಿಕೊಂಡಿದ್ದ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂಬ ಮನವಿಯನ್ನು ಹೈ ಕೋರ್ಟ್ ನಿರಾಕರಿಸಿದೆ.
ಶಾಸಕ ಆನಂದ್ ಸಿಂಗ್ ದಾಖಲಿಸಿರುವ ಎಫ್ಐಆರ್ ಹಾಗೂ ಆ ಮೇರೆಗೆ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಕೋರಿ ಆರೋಪಿತ ಶಾಸಕ ಕಂಪ್ಲಿ ಗಣೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಬಿ.ಎ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಹಿಂದಿನ ವಿಚಾರಣೆ ವೇಳೆ ಕೋರ್ಟ್ ನೀಡಿದ್ದ ಸೂಚನೆಯಂತೆ ಶಾಸಕ ಕಂಪ್ಲಿ ಗಣೇಶ್ ನ್ಯಾಯಾಲಯದ ಎದರು ಹಾಜರಾಗಿದ್ದರು. ಆದರೆ, ದೂರುದಾರ ಶಾಸಕ ಆನಂದ್ ಸಿಂಗ್ ಗೈರಾಗಿದ್ದರು.
ವಿಚಾರಣೆ ವೇಳೆ, ಆನಂದ್ ಸಿಂಗ್ ಪರ ವಕೀಲರು ತಮ್ಮ ಕಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗಲು ಹತ್ತು ದಿನಗಳ ಕಾಲಾವಕಾಶ ನೀಡಬೇಕು ಎಂದು ಮಾಡಿದ ಮನವಿಯನ್ನು ಪೀಠ ಮಾನ್ಯ ಮಾಡಿತು. ಇದೇ ವೇಳೆ, ಗಣೇಶ್ ಪರ ವಕೀಲರು ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕಳ್ಳಲು ಸಿದ್ಧರಾಗಿರುವುದರಿಂದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದರು. ಆದರೆ, ವಿಶೇಷ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ಪೀಠ ನಿರಾಕರಿಸಿತು. ಜತೆಗೆ, ರಾಜಿ ಮಾಡಿಕೊಳ್ಳಲು ಮುಂದಾಗಿರುವ ವಿಷಯವನ್ನು ವಿಶೇಷ ನ್ಯಾಯಾಲಯದ ಗಮನಕ್ಕೆ ತರಲು ಶಾಸಕ ಗಣೇಶ್ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಿತು.