ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ ಜಾಗೃತ ಕರ್ನಾಟಕ ಜಾಗೃತ ಭಾರತ ಸಂಘಟನೆಯ ಅಧ್ಯಕ್ಷ ಕೆ.ಎನ್.ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ಅರ್ಜಿದಾರರು ಇದು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಪ್ರಮುಖ ವಿಚಾರವಾಗಿದೆ. ಈಗಾಗಲೇ ಹೊರಡಿಸಿರುವ ಆದೇಶದಲ್ಲಿ ಕೆಲವೊಂದು ತಪ್ಪಾಗಿದ್ದು, ಅವುಗಳನ್ನು ಸರಿಪಡಿಸುವಂತೆ ನಿರ್ದೇಶನ ನೀಡುವಂತೆ ಕೋರಿದರು. ಇದಕ್ಕೂ ಮುನ್ನ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಕೆಲವೊಂದು ಆಕ್ಷೇಪಣೆಗಳನ್ನು ಎತ್ತಿದೆ, ಅವುಗಳನ್ನು ಮೊದಲು ಸರಿಪಡಿಸಬೇಕು ಎಂದು ತಿಳಿಸಿತು.
ಈ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, ಇದು ಅಂತಾರಾಜ್ಯ ನದಿ ನೀರು ವಿಚಾರವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ನದಿ ನೀರು ವ್ಯಾಜ್ಯ ಕಾಯಿದೆ 1956 ಅನ್ವಯ ಈ ವಿಚಾರಗಳಲ್ಲಿ ಹೈಕೋರ್ಟ್ ಯಾವುದೇ ಆದೇಶ ನೀಡಲಾಗದು. ಸುಪ್ರೀಂಕೋರ್ಟ್ ಮಾತ್ರ ಈ ಬಗ್ಗೆ ವಿಚಾರಣೆ ನಡೆಸಿ ಅದೇಶ ನೀಡಬಹುದಾಗಿದೆ ಎಂದು ತಿಳಿಸಿತು.
ಅಲ್ಲದೇ, ವಿಚಾರಣೆ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಈ ಬಗ್ಗೆ ಕಾನೂನು ಏನನ್ನು ಹೇಳಲಿದೆ ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ಅಂತಾರಾಜ್ಯ ನದಿ ನೀರು ವ್ಯಾಜ್ಯ ಕಾಯಿದೆಯ ಸೆಕ್ಷನ್ಗಳನ್ನು ಉಲ್ಲೇಖಿಸಿ, ಈ ವಿಚಾರಗಳಲ್ಲಿ ಹೈಕೋರ್ಟ್ ಯಾವುದೇ ಆದೇಶ ನೀಡಲಾಗದು ಎಂದು ಹೇಳಿದರು.
ಇದಕ್ಕೆ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಎತ್ತಿರುವ ಆಕ್ಷೇಪಗಳಿಗೆ ಅರ್ಜಿದಾರರು ಉತ್ತರಿಸಿಲ್ಲ. ಅಲ್ಲದೇ, ಸಂವಿಧಾನದ 262(2)ಅನ್ವಯ ಹಲವು ನಿರ್ದೇಶನಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಈ ವಿಚಾರದಲ್ಲಿ ಅಂತಾರಾಜ್ಯ ನದಿ ನೀರು ವ್ಯಾಜ್ಯ ಕಾಯಿದೆ ಅತ್ಯಂತ ಸ್ಪಷ್ಟವಾಗಿದೆ. ಅಂತಾರಾಜ್ಯ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಾತ್ರ ಅರ್ಜಿಗಳನ್ನು ಪುರಸ್ಕರಿಸಬಹುದು, ಇತರ ನ್ಯಾಯಾಲಯಗಳಿಗೆ ನಿರ್ಬಂಧ ಇದೆ ಎಂದು ಆದೇಶಿಸಿತು. ಅಲ್ಲದೇ, ಅರ್ಜಿದಾರರು ಅಗತ್ಯವಿದ್ದಲ್ಲಿ ಇತರ ಪರ್ಯಾಯ ವೇದಿಕೆಗಳಲ್ಲಿ ಪರಿಹಾರ ಕಂಡು ಕೊಳ್ಳಬಹುದು ಎಂದು ನ್ಯಾಯಾಲಯ ಸೂಚನೆ ನೀಡಿ ಅರ್ಜಿ ಇತ್ಯರ್ಥ ಮಾಡಿತು.
ಇದನ್ನೂ ಓದಿ: ಗರ್ಭಿಣಿ ವಕೀಲೆಗೆ ಮನೆ ಬಳಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದ ಹೈಕೋರ್ಟ್