ಬೆಂಗಳೂರು: ಸಂಸದ ಶ್ರೀನಿವಾಸ ಪ್ರಸಾದ್ ವಿರುದ್ಧ ಮಾಜಿ ಸಚಿವ ಡಾ ಹೆಚ್.ಸಿ. ಮಹಾದೇವಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ, 2018ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಯಶಸ್ವಿ ಸರ್ಕಾರವನ್ನು ಉರುಳಿಸಲು ಮತ್ತು ಶೋಷಿತರ ಹಾಗೂ ಅಹಿಂದ ವರ್ಗಗಳ ಕೈಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಯಾರೆಲ್ಲಾ ಸಂಚು ಮಾಡಿದ್ದಾರೆಂದು ನನಗೂ ಗೊತ್ತಿದೆ. ಈ ಬಗ್ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೂ ಸಹ ನಿಖರವಾದ ಮಾಹಿತಿ ಇರಬಹುದು ಎಂದಿದ್ದಾರೆ.
ನಂಜನಗೂಡು ಉಪ ಚುನಾವಣೆಯಲ್ಲಿ ನಾನು ಮತ್ತು ಸಿದ್ದರಾಮಯ್ಯನವರು ಶ್ರೀನಿವಾಸ್ ಪ್ರಸಾದ್ ಅವರನ್ನು ಸೋಲಿಸಿದೆವು ಎಂದು ಪ್ರಸಾದ್ ಹೇಳಿದ್ದಾರೆ. ಹಾಗಿದ್ದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಿಟ್ಟು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಪ್ರಸಾದ್ ಅವರನ್ನು ಗೆಲ್ಲಿಸಬೇಕಾಗಿತ್ತೇ? ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೇಲೆ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಶ್ರೀನಿವಾಸ್ ಪ್ರಸಾದ್ ಅವರು ಕೇವಲ ಒಣ ರಾಜಕೀಯ ಮಾಡುವುದರಲ್ಲಿ ಮಗ್ನರಾಗಿದ್ದು ಬಾಬಾ ಸಾಹೇಬರ ಶ್ರಮದಿಂದ ದೊರೆತ ಅಧಿಕಾರದ ಉದ್ದೇಶ ಹಾಗೂ ಅದರ ಮಹತ್ವವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ವಾ? ಸಂಸದ ವಿ.ಶ್ರೀ ವಾಗ್ದಾಳಿ
ಬಾಬಾ ಸಾಹೇಬರ ಮಾತಿಗೆ ಅನುಸಾರವಾಗಿ ರಾಜಕೀಯ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯದ ಏಳಿಗೆಗೆ ಶ್ರಮಿಸಿದ್ದೇವೆ ಎಂದು ನಾವು ಗರ್ವದಿಂದ ಹೇಳುತ್ತೇವೆ. ಹೀಗೆ ಹೇಳುವ ನೈತಿಕತೆ ಕೋಮುವಾದಿಗಳ ಜೊತೆ ಸೇರಿಕೊಂಡಿರುವ ಶ್ರೀನಿವಾಸ್ ಪ್ರಸಾದ್ ಅವರಲ್ಲಿ ಉಳಿದಿದೆಯೇ? ಎಂದು ಕೇಳಿದ್ದಾರೆ.