ಬೆಂಗಳೂರು: ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣ ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿ ಮರುಜಾರಿಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಅಲ್ಲದೇ, ಈ ಕುರಿತಂತೆ ಚುನಾಯಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಸಲಹೆ ನೀಡಿದೆ. ಹುಬ್ಬಳ್ಳಿಯ ವೈದ್ಯ, ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಡಾ. ವಿನೋದ್ ಜಿ. ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಕೆಲಕಾಲ ಅರ್ಜಿದಾರ ವಿನೋದ್ ಜಿ. ಕುಲಕರ್ಣಿ ವಾದ ಆಲಿಸಿದ ನ್ಯಾಯಪೀಠ, ರೈಲ್ವೆ ಪ್ರಯಾಣ ದರದಲ್ಲಿ ರಿಯಾಯಿತಿ ಅಥವಾ ವಿನಾಯಿತಿ ನೀಡುವುದು ಸರ್ಕಾರದ ನೀತಿ ನಿರ್ಧಾರಕ ವಿಷಯವಾಗಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡುವುದು ಅಥವಾ ಮಧ್ಯಪ್ರವೇಶಿಸಲು ಬರುವುದಿಲ್ಲ. ಅರ್ಜಿದಾರರ ಕಾಳಜಿ ಮತ್ತು ಬದ್ಧತೆ ಬಗ್ಗೆ ಅನುಮಾನವಿಲ್ಲ. ಅರ್ಜಿದಾರರ ಬೇಡಿಕೆ ನ್ಯಾಯೋಚಿತವಾಗಿರಬಹುದು. ಆದರೆ, ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ರೂಪದಲ್ಲಿ ಪರಿಗಣಿಸಲು ಆಗುವುದಿಲ್ಲ ಎಂದು ತಿಳಿಸಿತು.
ಅಲ್ಲದೇ ಅರ್ಜಿದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಭ್ಯವಿರುವ ಬೇರೆ ಮಾರ್ಗಗಳನ್ನು ಬಳಸಿಕೊಳ್ಳಬಹುದು. ಅದರಂತೆ ಚುನಾಯಿತ ಜನಪ್ರತಿನಿಧಿಗಳಾದ ಸಂಸದರು ಮತ್ತು ಶಾಸಕರಿಗೆ ಅರ್ಜಿದಾರರು ಮನವಿ ಸಲ್ಲಿಸಲಿ. ಅಲ್ಲದೆ, ಅವರ ಮೇಲೆ ಒತ್ತಡ ತರಲಿ. ಅವರು ಆ ಬಗ್ಗೆ ಶಾಸನಸಭೆಗಳಲ್ಲಿ ಧ್ವನಿ ಎತ್ತುತ್ತಾರೆ. ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುವುದರ ಬದಲು ಅರ್ಜಿದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಲಭ್ಯವಿರುವ ಅವಕಾಶಗಳನ್ನು ಪರಿಣಾಮಕಾರಿ ಮತ್ತು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು.
ಅರ್ಜಿಯಲ್ಲಿ ಏನಿತ್ತು ? : 58 ವರ್ಷ ದಾಟಿದ ಮಹಿಳೆಯರಿಗೆ ಶೇಕಡಾ 50ರಷ್ಟು ಹಾಗೂ 60 ವರ್ಷ ದಾಟಿದ ಪುರುಷರಿಗೆ (ಹಿರಿಯ ನಾಗರಿಕರು) ಶೇಕಡಾ 40ರಷ್ಟು ರೈಲ್ವೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು. ಇದರಿಂದ ಬದುಕಿನ ಸಂಧ್ಯಾ ಕಾಲದಲ್ಲಿರುವ ಹಿರಿಯ ನಾಗರಿಕರು ತಮ್ಮಿಷ್ಟದ ಧಾರ್ಮಿಕ ಕೇಂದ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಮತ್ತು ತಮ್ಮ ದೂರದ ಸಂಬಂಧಿಗಳನ್ನು ಭೇಟಿ ಮಾಡಲು ಬಹಳ ಅನುಕೂಲವಾಗಿತ್ತು. ಕೊರೊನಾ ನಂತರ ಕಳೆದು ಎರಡು ವರ್ಷಗಳಿಂದ ರೈಲ್ವೆ ಇಲಾಖೆ ಈ ರಿಯಾಯಿತಿಯನ್ನು ಸ್ಥಗಿತಗೊಳಿಸಿದೆ. ಇದು ನಾಗರಿಕರ ಪ್ರಯಾಣದ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ. ಈ ವಿಚಾರವನ್ನು ಜನಪ್ರತಿನಿಧಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಇದನ್ನೂ ಓದಿ: ಪಿಎಸ್ಐ ಹಗರಣ: ಆರೋಪ ಪಟ್ಟಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಅಮೃತ್ ಪೌಲ್ ಪರ ವಕೀಲರ ಆಕ್ಷೇಪ