ಬೆಂಗಳೂರು : ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆಗೆ ಕಾರಣನಾಗಿ ಜೈಲು ಸೇರಿದ್ದ ಆರೋಪಿ ನವೀನನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಸಂಬಂಧ ಜಾಮೀನು ಕೋರಿ ಆರೋಪಿ ನವೀನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಬಿಎ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿದೆ. ಆರೋಪಿ 2 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ಒದಗಿಸಬೇಕು. ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಬಾರದು. ನ್ಯಾಯಾಲಯದ ಅನುಮತಿ ಪಡೆಯದೇ ವ್ಯಾಪ್ತಿ ಪ್ರದೇಶ ಬಿಟ್ಟು ಹೊರ ಹೋಗಬಾರದು. ಪ್ರತಿ ತಿಂಗಳ ಒಂದನೇ ತಾರೀಕಿನಂದು ಪೊಲೀಸ್ ಠಾಣೆಗೆ ತೆರಳಿ ರುಜು ಹಾಕಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡಿದೆ.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ಆರೋಪಿ ನವೀನ್ ಪರ ವಕೀಲರು ವಾದಿಸಿ, ಅರ್ಜಿದಾರ ಉದ್ದೇಶ ಪೂರ್ವಕವಾಗಿ ಪೋಸ್ಟ್ ಹಾಕಿರಲಿಲ್ಲ. ಅಪರಾಧ ಎಸಗುವ ಅಥವಾ ಕೋಮು ಸೌಹಾರ್ದ ಉದ್ದೇಶ ನವೀನ್ಗೆ ಇರಲಿಲ್ಲ. ಹಾಗಿದ್ದೂ ಕೆಲ ವ್ಯಕ್ತಿಗಳು ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ಡೌನ್ಲೋಡ್ ಮಾಡಿ ಬೇರೆಯ ವ್ಯಕ್ತಿಗಳಿಗೆ ಹಂಚಿಕೆ ಮಾಡಿದ್ದರು. ಈ ವಿಚಾರ ತಿಳಿಯುತ್ತಲೇ ನವೀನ್ ತನ್ನ ಫೇಸ್ಬುಕ್ ಖಾತೆಯಲ್ಲಿದ್ದ ಪೋಸ್ಟ್ ಡಿಲೀಟ್ ಮಾಡಿದ್ದರು. ಅಲ್ಲದೇ, ಘಟನೆ ಬಳಿಕ ನವೀನ್ ಪೊಲೀಸರ ತನಿಖೆಗೆ ಎಲ್ಲ ಸಹಕಾರ ನೀಡಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಅರ್ಜಿದಾರ ನವೀನಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಅವರು ಪ್ರತಿವಾದ ಮಂಡಿಸಿ, ಆರೋಪಿಯ ಪೋಸ್ಟ್ನಿಂದಲೇ ಇಷ್ಟೆಲ್ಲ ಗಲಭೆಯಾಗಿದೆ. ಗಲಭೆಯಲ್ಲಿ ಎರಡು ಪೊಲೀಸ್ ಠಾಣೆ ಜಖಂಗೊಂಡಿದೆ ಹಾಗೂ ನೂರಾರು ವಾಹನಗಳು ಬೆಂಕಿಗಾಹುತಿಯಾಗಿವೆ. ಮೇಲಾಗಿ ಅರ್ಜಿದಾರನನ್ನು ಬಿಡುಗಡೆ ಮಾಡಿದರೆ ಆತನ ಜೀವಕ್ಕೆ ಅಪಾಯವಿದೆ. ಸಮಾಜದ ಶಾಂತಿ ಮತ್ತೆ ಕದಡುವ ಸಾಧ್ಯತೆ ಇರುವುದರಿಂದ ಆರೋಪಿಗೆ ಜಾಮೀನು ನೀಡಬಾರದು ಎಂದು ಕೋರಿದ್ದರು.
ವಾದ - ಪ್ರತಿವಾದ ದಾಖಲಿಸಿಕೊಂಡ ಪೀಠ, ಜೀವಕ್ಕೆ ಅಪಾಯವಿದೆ, ಮರಣಕ್ಕೆ ಜಾಮೀನು ನಿರಾಕರಿಸಿದರೆ ಅದು ಅರ್ಜಿದಾರನು ಮೂಲ ಹಕ್ಕು ಉಲ್ಲಂಘಿಸಿದಂತೆ ಆಗುತ್ತದೆ. ಅರ್ಜಿದಾರ ಘಟನೆಯ ಕಾರಣವಾದ ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಕಠಿಣ ಷರತ್ತು ವಿಧಿಸಿ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟು ಆರೋಪಿ ನವೀನನಿಗೆ ಜಾಮೀನು ನೀಡಿದೆ. ಇದೇ ವೇಳೆ, ಆರೋಪಿ ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾದರೆ ಆತನ ಜಾಮೀನು ರದ್ದು ಪಡಿಸಲು ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.