ಬೆಂಗಳೂರು: ಪಾದಚಾರಿಗಳ ಸಂಚಾರಕ್ಕೆ ಮೀಸಲಿರುವ ಫುಟ್‌ಪಾತ್ ಮೇಲೆ ವಾಹನಗಳನ್ನು ನಿಲ್ಲಿಸಿದರೆ ದಂಡ ವಿಧಿಸುವುದು, ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಲಾಗಿದೆ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ನಗರದ ವಕೀಲ ರಾಮಚಂದ್ರ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ಲಾಯರ್‌ಗಳ ಗುಮಾಸ್ತರ ನೆರವಿಗಾಗಿ ಬ್ಯಾಂಕ್ ಖಾತೆ ತೆರೆಯಿರಿ; ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಗುಣಮಟ್ಟದ ಪಾದಚಾರಿ ಮಾರ್ಗಗಳನ್ನು ನೀಡುವುದು ಸರ್ಕಾರದ ಜವಾಬ್ದಾರಿ ಮತ್ತು ಅಂತಹ ಫುಟ್ ಪಾತ್ ಗಳನ್ನು ಬಳಸುವುದು ನಾಗರಿಕರ ಮೂಲಭೂತ ಹಕ್ಕು. ಇದಕ್ಕೆ ಅಡ್ಡಿಪಡಿಸಿ ಫುಟ್‌ಪಾತ್ ಮೇಲೆ ವಾಹನ ನಿಲುಗಡೆ ಮಾಡಿದರೆ, ಅಂಥವರ ವಿರುದ್ಧ ಕರ್ನಾಟಕ ಮೋಟಾರು ವಾಹನ ಕಾಯ್ದೆ, ಮೋಟಾರು ವಾಹನ ನಿಯಮಗಳು, ಭಾರತೀಯ ದಂಡ ಸಂಹಿತೆ, ಕರ್ನಾಟಕ ಟ್ರಾಫಿಕ್ ರೂಲ್ಸ್ ಸೇರಿ ಇನ್ನಿತರೆ ನಿಯಮಗಳ ಅಡಿ ದಂಡ ವಿಧಿಸುವುದು, ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿದಂತೆ ಎಲ್ಲ ರೀತಿಯ ಕಾನೂನಾತ್ಮಕ ಪ್ರಕ್ರಿಯೆಗೆ ಜರುಗಿಸಿ. ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರಿಗೆ ಮತ್ತು ಬಿಬಿಎಂಪಿಗೆ ನಿರ್ದೇಶಿಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.