ಬೆಂಗಳೂರು: ತಂತ್ರಜ್ಞಾನ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದ್ದು ಇದಕ್ಕೆ ಹೋಟೆಲ್ ಉದ್ಯಮವೂ ಹೊರತಾಗಿಲ್ಲ. ಆಹಾರ ತಯಾರಿಸಲು ಹಾಗೂ ಬಿಸಿ ಮಾಡಲು ನವೀನ ಯಂತ್ರಗಳು ಈಗಾಗಲೇ ಬಂದಿವೆ. ಗ್ರಾಹಕರಿಗೆ ಕಾಫಿ ಕೊಡಲೆಂದೇ ಇದೇ ಮೊದಲ ಬಾರಿಗೆ ಮಾನವರಹಿತ ರೋಬೊ ತಂತ್ರಜ್ಞಾನವನ್ನು ಹಟ್ಟಿ ಕಾಫಿ ಹೋಟೆಲ್ ಆವಿಷ್ಕರಿಸಿದೆ.
ಹೋಟೆಲ್ಗೆ ಹೋಗಿ ಕಾಫಿ ಆರ್ಡರ್ ಮಾಡಿ ಟೇಬಲ್ನಲ್ಲಿ ಕುಳಿತರೆ ಸಾಕು, ಕೆಲವು ಕ್ಷಣಗಳ ಬಳಿಕ ಸ್ವಯಂಚಾಲಿತವಾಗಿ ರೋಬೊ ಯಂತ್ರದ ಮೂಲಕ ನಿಮಗೆ ಕಾಫಿ ಸೇವೆ ಸಿಗುತ್ತದೆ. ಇಂಥದ್ದೊಂದು ವಿಭಿನ್ನ ವ್ಯವಸ್ಥೆಗೆ ಹಟ್ಟಿ ಕಾಫಿ ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ವಿವಿಧ ಶಾಖೆಗಳಲ್ಲಿ ಮಾನವರಹಿತ ಯಂತ್ರ ಅರ್ಥಾರ್ ಸಪ್ಲಾಯರ್ ಸೇವೆ ನೀಡಲು ಮುಂದಾಗಿದೆ.
ಅರಮನೆ ಮೈದಾನದಲ್ಲಿ ಮಂಗಳವಾರ ಆರಂಭಗೊಂಡಿರುವ 3 ದಿನಗಳ ಬೆಂಗಳೂರು ತಾಂತ್ರಿಕ ಶೃಂಗಸಭೆಯಲ್ಲಿ ರೋಬೋಟ್ ಯಂತ್ರ ಜನರ ಗಮನ ಸೆಳೆಯಿತು. ಮಾನವರಹಿತ ಸ್ವಯಂಚಾಲಿತ ಯಂತ್ರವು ಕಾಫಿಯನ್ನು ಗ್ರಾಹಕರು ಕುಳಿತ ಜಾಗಕ್ಕೆ ನೀಡುವ ವಿನೂತನ ತಂತಜ್ಞಾನ ಕಂಡು ಸಾರ್ವಜನಿಕರು ಪುಳಕಗೊಂಡರು.
ಎಲ್ಲಾ ಕ್ಷೇತ್ರಗಳಂತೆ ವಿಶಿಷ್ಟವಾಗಿ ಹಾಗೂ ವಿನೂತನವಾಗಿ ಗ್ರಾಹಕರಿಗೆ ಸೇವೆ ನೀಡಲು ಹಾಗೂ ವಿಶೇಷಚೇತರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾದಾಗ ಹೊಳೆದಿದ್ದೇ ಈ ರೋಬೊ ಟೆಕ್ನಾಲಜಿ. ಬೆಂಗಳೂರಿನ ಐಎಎಸ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರೊಫೆಸರ್ ನೇತೃತ್ವದಲ್ಲಿ ಕೊಯಮತ್ತೂರಿಯ ಯುವ ವಿಜ್ಞಾನಿಗಳ ತಂಡ ಸೆನ್ಸಾರ್ ಒಳಗೊಂಡಿರುವ ರೋಬೊ ಯಂತ್ರವನ್ನು ಕಂಡುಹಿಡಿದಿದೆ. ಪ್ರಾಯೋಗಿಕವಾಗಿ ಟೆಕ್ ಸಮ್ಮಿಟ್ನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ವಿಶೇಷಚೇತನರನ್ನು ಮುಖ್ಯವಾಹಿನಿಗೆ ತರುವುದು ಇದರ ಉದ್ದೇಶ. ಉದ್ಯೋಗ ನೀಡಿ ಆರ್ಥಿಕವಾಗಿ ಸದೃಢಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ಅವರನ್ನು ಬಿಲ್ಲಿಂಗ್ ಹಾಗೂ ಇನ್ನಿತರ ಉದ್ಯೋಗಗಳಿಗೆ ನೇಮಿಸಲಾಗುತ್ತಿದೆ. ಕಾಫಿ ಆರ್ಡರ್ ಮಾಡಿದರೆ ಕಣ್ಣಿಲ್ಲದ ಉದ್ಯೋಗಿಯು ಬ್ರೈಲ್ ಲಿಪಿ ಸಹಾಯದಿಂದ ಬಿಲ್ಲಿಂಗ್ ಮಾಡಿ ಸೂಚಿಸಿದ ಟೇಬಲ್‌ಗೆ ಕಾಫಿ ಒದಗಿಸಲು ಕಮಾಂಡ್ ಮಾಡುತ್ತಾರೆ. ಸೆನ್ಸಾರ್ ಸಹಾಯದಿಂದ ರೋಬೊ ಯಂತ್ರದ ಮೇಲೆ ಕಾಫಿ ಇಟ್ಟು ನಿರ್ದಿಷ್ಟ ಗುರಿಯೆಡೆಗೆ ಸ್ವಯಂಚಾಲಿತವಾಗಿ ಚಲಿಸಲಿದೆ. ಒಂದು ವೇಳೆ ಯಾರಾದರೂ ಅಡ್ಡಬಂದರೆ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ದಾರಿ ಮಾಡಿಕೊಡುವಂತೆ ಕೇಳುತ್ತದೆ. ಇದಕ್ಕೆ ಸಪ್ಲಾಯರ್ ಸಹಾಯದ ಅಗತ್ಯವಿಲ್ಲ. ಅಲ್ಲದೆ, ಬಿಲ್ಲಿಂಗ್ ಹಾಗೂ ಕಾಫಿ ಕೌಂಟರ್ಗಳಲ್ಲಿ ವಿಕಲಾಂಗರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಇದರ ಜೊತೆಗೆ ಹೊಸ ಗ್ರಾಹಕ ಸೇವೆಗೂ ನಾಂದಿ ಹಾಡಲಿದೆ.
ಹಟ್ಟಿ ಕಾಫಿ ಹೋಟೆಲ್ ಅನ್ನು ಹಾಸನದ ಯು.ಎಸ್.ಮಹೇಂದ್ರ ಕುಮಾರ್, ಎಲ್.ಗೌಡ ಎಂಬವರು 2009ರಲ್ಲಿ ಆರಂಭಿಸಿದ್ದರು. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 76 ಹೋಟೆಲ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಹೋಟೆಲ್ನಲ್ಲಿ ರೋಬೊ ಯಂತ್ರವನ್ನು ಪರಿಚಯಿಸಲಾಗುವುದು ಎಂದು 'ಈಟಿವಿ ಭಾರತ್'ಗೆ ಹೋಟೆಲ್ ಸಿಇಒ ಯು.ಎಸ್.ಮಹೇಂದ್ರ ಕುಮಾರ್ ತಿಳಿಸಿದರು.
ಅಂಧ ಮಹಿಳೆ ಚುಂಬಿಕಾ ಮಾತನಾಡಿ, "ರೋಬೊ ಯಂತ್ರ ಆವಿಷ್ಕಾರದಿಂದ ಸ್ವಯಂಚಾಲಿತವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ. ಹೋಟೆಲಿಗೆ ಬಂದು ಕಾಫಿ ಆರ್ಡರ್ ಮಾಡುವವರಿಗೆ ಬ್ರೈಲ್ ಲಿಪಿ ನೆರವಿನಿಂದ ಕೆಲಸ ಮಾಡಲು ನಮಗೆ ಅನುಕೂಲವಾಗುತ್ತದೆ. ನಮ್ಮಂತವರಿಗೆ ಹೊಸ ತಂತ್ರಜ್ಞಾನ ಹೊಸ ವೇದಿಕೆಯಾಗಲಿದೆ" ಎಂದರು.
ಇದನ್ನೂ ಓದಿ: ಮ್ಯಾನ್‌ಹೋಲ್‌ಗಳ ಸ್ವಚ್ಛತೆಗೂ ಬಂತು ರೋಬೋಟ್! ಬೆಂಗಳೂರಿನಲ್ಲಿ ನಡೆದ 'ಮುನಿಸಿಪಾಲಿಕಾ' ಸಮ್ಮೇಳನದಲ್ಲಿ ಪ್ರದರ್ಶನ