ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಕಾರ್ಯಕರ್ತರಿಗೆ ಅಂತ ಹೇಳಿದ್ದೇನೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಹಿರಂಗ ಪಡಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ವಾಜರಹಳ್ಳಿಯಲ್ಲಿ ಶನಿವಾರ ಸಂಜೆ ನಡೆದ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು. ಈ ಹಿಂದೆ ಹೇಳಿದಂತೆ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ಎಂದು ಪರೋಕ್ಷವಾಗಿ ಹೇಳಿದರು.
ಹಾಸನ ಟಿಕೆಟ್ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಜೆಡಿಎಸ್‌ನಲ್ಲಿ ಟಿಕೆಟ್ ಪಡೆಯೋದು ಕೂಡ ಕಷ್ಟವೇ. ಹಾಸನ ಟಿಕೆಟ್ ಕೂಡ ಪಡೆಯೋದು ಸಹ ಕಷ್ಟ. ಈಗಾಗಲೇ ಹಲವು ಕಾರ್ಯಕರ್ತರು ಕೇಳಿದ್ದನ್ನು ನೀವೇ ನೋಡಿದಿರಿ. ನಾನು ಕಾರ್ಯಕರ್ತರಿಗೆ ಟಿಕೆಟ್ ಕೊಡೋದು.ಈಗಾಗಲೇ ತೀರ್ಮಾನ ಆಗಿದೆ, ಆಗುತ್ತೆ ಕೂಡ ಎಂದು ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಕುಮಾರಸ್ವಾಮಿ ರವಾನಿಸಿದರು.
ಪಕ್ಷೇತರ ಎಂಬ ಬ್ಲಾಕ್‌ಮೇಲ್ ನನ್ನ ಹತ್ತಿರ ನಡೆಯಲ್ಲ. ಹಾಸನ ನಮ್ಮ ಪಕ್ಷದ ಅಭ್ಯರ್ಥಿ ಒಬ್ಬ ಕಾರ್ಯಕರ್ತ ಅಂತ ನಾನು ನಿರಂತರವಾಗಿ ಹೇಳಿದ್ದೇನೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾರ್ಯಕರ್ತ ಯಾರು ಸಮರ್ಥವಾಗಿದ್ದರೆ ಅಂತ ನನಗೂ ಗೊತ್ತು, ನಿಮಗೂ ಗೊತ್ತು ಕಾರ್ಯಕರ್ತರೆ ಯಾರಿಗೆ ಟಿಕೆಟ್ ಅಂತ ಕೂಗ್ತಿದ್ದಾರೆ.
ಈಗಾಗಲೇ ತೀರ್ಮಾನವಾಗಿದೆ. ಸದ್ಯದಲ್ಲೆ ಘೋಷಣೆ ಕೂಡ ಆಗಲಿದೆ. ಯಾವ ಆತಂಕ ಬೇಡ. ನನ್ನ ಪಕ್ಷದ ಜವಾಬ್ದಾರಿ ಬಳಿಕ ನನಗೆ ಕಾರ್ಯಕರ್ತ ಮುಖ್ಯ ಎಲ್ಲರನ್ನೂ ಒಂದುಗೂಡಿಸಿ ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದೇವೆ. ಅತ್ಯಂತ ತಾಳ್ಮೆಯಿಂದ ನಡೆದುಕೊಂಡಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನನ್ನ ಹತ್ತಿರ ಯಾವ ಬ್ಲಾಕ್ ಮೇಲ್ ನಡೆಯಲ್ಲ.ದೇವೆಗೌಡರ ಬಳಿ ಹೋಗಿ ಬ್ಲಾಕ್ ಮೇಲ್ ಮಾಡಬಹುದು.ನಾನು ಪಕ್ಷದ ಜವಾಬ್ದಾರಿ ತಗೆದುಕೊಂಡ ಮೇಲೆ ಕಾರ್ಯಕರ್ತರನ್ನು ಉಳಿಸಿಕೊಂಡಿದ್ದೇನೆ.ಕುಟುಂಬದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈವರೆಗೂ ಕಾಪಾಡಿಕೊಂಡು ಬಂದಿದ್ದೇನೆ ಎಂದು ಖಡಕ್ ಆಗಿ ಹೇಳಿದರು.
ನಿಮ್ಮದೇ (ಬಿಜೆಪಿ) ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.ಕಾಂಗ್ರೆಸ್, ಬಿಜೆಪಿಯಲ್ಲೇ ಅನೇಕ ಗೊಂದಲಗಳಿವೆ.ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವ ಕೆಲಸ ಮಾಡಬಾರದು.ಕೆಲ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ಜಾಗತಿಕ ಪ್ರಪಂಚದಲ್ಲಿ ಪರಿಸ್ಥಿತಿ ಎಲ್ಲಿಗೆ ಹೋಗುತ್ತೆ ಅನ್ನೋದನ್ನು ಅರ್ಥ ಮಾಡಿಕೊಂಡಿಕೊಂಡಿದ್ದೀರಾ..? ಇವರಿಗೆ ಅದರ ಬೆಲೆ ಏನು ಅಂತ ಗೊತ್ತಾ? ಎಂದು ಪ್ರಶ್ನಿಸಿದರು.
ಇವರೇನಾದ್ರು ಕಷ್ಟಪಟ್ಟು ಸಂಪಾದನೆ ಮಾಡಿದ್ರೆ ಅದರ ಬೆಲೆ ಗೊತ್ತಾಗುತ್ತಿತ್ತು.ಯಾರದೋ ದುಡಿಮೆ ಮಾಡಿದರೆ ನಾವು ಮಾಡಿದೆವೆಂದು ಪ್ರಚಾರ ಮಾಡಿಕೊಳ್ಳೋದು ಬಿಟ್ಟರೆ ಏನಿದೆ ಇವರ ಕಾಂಟ್ರಿಬ್ಯೂಷನ್ ..? ಅವರಿಗೆ ವ್ಯವಹಾರ ಜ್ಞಾನವಿಲ್ಲ. ಬಿಜೆಪಿ ಆಡಳಿತದಲ್ಲಿ ಎಲ್ಲಾ ನಾಶ ಮಾಡೋಕೆ ಹೊರಟಿರೋದನ್ನ ಜನರಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು .
120 ಸೀಟು ಗೆಲ್ಲಲು ನಮ್ಮ ಹೋರಾಟ: ಬಂಡಾಯ ಅಭ್ಯರ್ಥಿಗಳು ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಬಂಡಾಯದ ಕೆಲ ಅಭ್ಯರ್ಥಿಗಳು ನಮ್ಮ ಜೊತೆ ಬರಬೇಕು ಅಂತ ಇದ್ದಾರೆ. ನಾವು 120 ಸೀಟು ಗೆಲ್ಲಬೇಕಲ್ಲ. ಹಾಗಾಗಿ, 120 ಸೀಟು ಗೆಲ್ಲಲು ನಮ್ಮ ಹೋರಾಟವಿದೆ.
ಮತ್ತೊಂದು ಮೈತ್ರಿ ಸರ್ಕಾರ ಮಾಡೋದಕ್ಕೆ ನನ್ನ ಹೋರಾಟವಿರುವುದು. ಈ ಸಲ ಬರೆದಿಟ್ಟುಕೊಳ್ಳಿ 120 ಸೀಟು ಗೆದ್ದೆ ಗೆಲ್ಲುತ್ತೇವೆ.ಪಕ್ಷ ಬಿಟ್ಟು ಹೋದವರ ಅವಶ್ಯಕತೆ ಇಲ್ಲ ಎಂದ ಹೆಚ್ಡಿಕೆ, ವರುಣಾ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಹಾಕುತ್ತೇವೆ ಎಂದು ತಿಳಿಸಿದರು.
ಅಮೂಲ್ ರಾಜ್ಯಕ್ಕೆ ಎಂಟ್ರಿ ವಿಚಾರ: ಅಮೂಲ್ ಗೆ ಜಾಗ ಕೊಟ್ಟಿದ್ದಾರೆ. ಯಾವ ಸರ್ಕಾರ ಕೊಟ್ಟಿದೆ ಎಂಬುದು ಗೊತ್ತಿಲ್ಲ. ಅದನ್ನು ಹೊರಗೆ ತೆಗೆಯುವ ಕೆಲಸ ಮಾಡುತ್ತಿದ್ದೇವೆ. 13 ಹಾಲು ಒಕ್ಕೂಟಗಳ ಮಹಾ ಮಂಡಳಿಗೆ ಲಾಭ ಮಾಡಿದ್ದು ದೇವೇಗೌಡರ ಕಾಲದಲ್ಲಿ. ಹೆಚ್ ಡಿ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದಾಗ, ಇವತ್ತು 80 ಕೋಟಿ ಲಾಭ ಮಾಡುತ್ತಿದೆ ಎಂದು ಹೇಳಿದರು.
ಅಮೂಲ್ ವಿಚಾರವಾಗಿ ಸಿ ಟಿ ರವಿ ಹೇಳಿಕೆ ವಿಚಾರಕ್ಕೆ ಟಾಂಗ್ ನೀಡಿದ ಹೆಚ್ಡಿಕೆ, ಅವರು ಕಷ್ಟ ಪಟ್ಟಿದ್ರೆ ಅಲ್ವಾ ಗೊತ್ತಾಗೋದು. ಈ ಬಿಜೆಪಿ ಆಡಳಿತದಲ್ಲಿ ಎಲ್ಲಾ ಸಂಪೂರ್ಣ ನಾಶ ಮಾಡ್ತಿದ್ದಾರೆ ಎಂದು ಗುಡುಗಿದರು.
ಇದಕ್ಕೂ ಮುನ್ನ ನಡೆದ ರೋಡ್ ಶೋನಲ್ಲಿ ಸ್ವರೂಪ್‌ಗೆ ಹಾಸನದಲ್ಲಿ ಟಿಕೆಟ್ ನೀಡುವಂತೆ ಕಾರ್ಯಕರ್ತರೊಬ್ಬರು ಆಗ್ರಹಿಸಿದ ಘಟನೆ ನಡೆಯಿತು. ಪಕ್ಷದ ಪರ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು. ಸ್ವರೂಪ್ ಪ್ರಕಾಶ್‌ಗೆ ಕೊಡಬೇಕೆಂದು ಕಾರ್ಯಕರ್ತ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಹೆಚ್ ಡಿಕೆ, ಕಾರ್ಯಕರ್ತರಿಗೆ ಟಿಕೆಟ್ ಅಂತ ಹೇಳಿದ್ದೀನಿ. ಅದರಲ್ಲಿ ಬದಲಾವಣೆ ಇಲ್ಲ ಎಂದರು.
ಇದನ್ನೂಓದಿ:ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳಿಂದ ಭಾರಿ ಕಸರತ್ತು.. ಜಿದ್ದಿಗೆ ಬಿದ್ದು ಆಶ್ವಾಸನೆಗಳ ಘೋಷಣೆ