ಬೆಂಗಳೂರು: ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್ ಯಾತ್ರೆಯ (Haj yatra) ಪ್ರಕ್ರಿಯೆಗೆ ಇಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಜ್ (Minister Shashikala Jolle) ಭವನದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.
![Haj Yatra Process started news](https://etvbharatimages.akamaized.net/etvbharat/prod-images/kn-bng-04-haj-yathre-7202707_10112021201906_1011f_1636555746_432.jpg)
ಆನ್ಲೈನ್ ಅರ್ಜಿಗಳ ಪ್ರಕ್ರಿಯೆಗೆ ಚಾಲನೆ ನೀಡಿ ಸಚಿವರು ಮಾತನಾಡಿ, ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಯಾತ್ರೆ ಹಜ್. ವಿಶ್ವದಾದ್ಯಂತ ಕೊರೊನಾ ಲಸಿಕೆ ಕಾರ್ಯ ಚುರುಕುಗೊಂಡಿದ್ದು, ಕೋವಿಡ್ (Covid) ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಹಜ್ ಯಾತ್ರೆಗೆ ಅವಕಾಶ ನೀಡುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಆನ್ಲೈನ್ ಮೂಲಕ ಅರ್ಜಿ ಪ್ರಕ್ರಿಯೆಗೆ ಚಾಲನೆ:
ಈ ಬಾರಿ ಹಜ್ ಯಾತ್ರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನವೆಂಬರ್ 1ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಕಾರ್ಯ ಪ್ರಾರಂಭವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಜನರು ಆನ್ ಲೈನ್ ಮೂಲಕವೇ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜನವರಿ 31, 2022 ರ ವರೆಗೆ ಅರ್ಜಿಯನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಸಿಎಂ ಸಮ್ಮುಖದಲ್ಲಿ ಖುರ್ರಾ (ಲಾಟರಿ) ನಡೆಸಿ, ಜುಲೈ 2022 ರಲ್ಲಿ ಹಜ್ ಯಾತ್ರೆಯನ್ನು ಅಯೋಜಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
![Haj Yatra Process started news](https://etvbharatimages.akamaized.net/etvbharat/prod-images/kn-bng-04-haj-yathre-7202707_10112021201906_1011f_1636555746_275.jpg)
ಯಾವುದೇ ತೊಂದರೆ ಆಗದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ವಿಮಾನದ ವ್ಯವಸ್ಥೆ, ಅಲ್ಲಿ ತಂಗುವ ಹಾಗೂ ಇನ್ನಿತರ ವ್ಯವಸ್ಥೆಗಳಲ್ಲಿ ಲೋಪವಿರದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಹಜ್ ಭವನ ನಿರ್ಮಾಣ, ಬೆಂಗಳೂರು ಹಜ್ ಭವನದ ರಿಪೇರಿ, ಹೆಚ್ಚಿನ ಅನುದಾನ ದೊರಕಿಸಿಕೊಡಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಉದ್ದೇಶಿತ ಫಿಲ್ಮ್‌ಸಿಟಿಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಚಿಂತನೆ: ಸಚಿವ ಎಸ್.ಟಿ.ಸೋಮಶೇಖರ್