ಬೆಂಗಳೂರು: ನೀವು ಮುಖ್ಯಮಂತ್ರಿ ಆಗಲು ಕಾರಣರಾದವರಿಗೆ ಮಂತ್ರಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯದ ಭೈರತಿ ಬಸವರಾಜುಗೆ ಸಚಿವ ಸ್ಥಾನ ನೀಡಿದ್ದಾರೆ. ಉಳಿದ ಮೂವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹಾಗೂ ಬಿಜೆಪಿ ದೆಹಲಿ ಬೇಸ್ ಪಕ್ಷಗಳಾಗಿವೆ. ಯಾವಾಗ ಅನುಮತಿ ಸಿಗುತ್ತದೆ ಆಗ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.
ಹುಣಸೂರು ಜಿಲ್ಲೆ ರಚಿಸುವಂತೆ ಮನವಿ:
ವಿಜಯನಗರ ಪ್ರತ್ಯೇಕ ಜಿಲ್ಲೆ ಬೇಡಿಕೆ ಬೆನ್ನಲ್ಲೇ ಹೆಚ್.ವಿಶ್ವನಾಥ್ ಹುಣಸೂರು ಪ್ರತ್ಯೇಕ ಜಿಲ್ಲೆಯ ಬೇಡಿಕೆ ಇಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಹುಣಸೂರಿಗೆ ಬಂದಾಗ ಹುಣಸೂರು ಜಿಲ್ಲೆ ಮಾಡಿ ಎಂದು ಬೇಡಿಕೆ ಇಡಲಾಗಿತ್ತು. ಆರು ತಾಲೂಕು ಸೇರಿ ದೇವರಾಜ್ ಅರಸು ಹೆಸರಿನಲ್ಲಿ ಜಿಲ್ಲೆ ಮಾಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಮೈಸೂರು ನಗರದ ಒತ್ತಡ ಕಾರಣದಿಂದ ಜಿಲ್ಲಾಧಿಕಾರಿ ಹುಣಸೂರು ಭಾಗಕ್ಕೆ ಅಪರೂಪಕ್ಕೆ ಬರುತ್ತಾರೆ. ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಸಚಿವ ಆನಂದ್ ಸಿಂಗ್ ಒತ್ತಡ ಹಾಕಿದ್ದರು ಎಂದರು.
ಕುರುಬ ಸಮುದಾಯದ ಸ್ವಾಮೀಜಿಗಳು, ಜನಪ್ರತಿನಿಧಿಗಳು ಸಿಎಂ ಬಿಎಸ್ವೈ ಭೇಟಿ ಮಾಡಿ ಮೂರು ಪ್ರಮುಖ ಬೇಡಿಕೆ ಇಟ್ಟಿದ್ದಾರೆ. ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ಮನವಿ ಮಾಡಿದ್ದೇವೆ. ಕುರುಬ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 500 ಕೋಟಿ ನೀಡಬೇಕು ಎಂದು ಆಗ್ರಹಿಸಲಾಗಿದೆ ಎಂದರು.
ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್: ಅಪರಾಧಿಯ ಪೆರೋಲ್ ಅವಧಿ ವಿಸ್ತರಿಸಿದ ಸುಪ್ರೀಂ